ಕಾಲ್ಬೆರಳುಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಗಮನ ಸೆಳೆದ ಬಂಟ್ವಾಳದ ಕೌಶಿಕ್ - Karavali Times ಕಾಲ್ಬೆರಳುಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಗಮನ ಸೆಳೆದ ಬಂಟ್ವಾಳದ ಕೌಶಿಕ್ - Karavali Times

728x90

26 June 2020

ಕಾಲ್ಬೆರಳುಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಗಮನ ಸೆಳೆದ ಬಂಟ್ವಾಳದ ಕೌಶಿಕ್

ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಂಚಿಕಾರಪೇಟೆ ನಿವಾಸಿ ರಾಜೇಶ್ ಆಚಾರ್ಯ ಹಾಗೂ ಜಲಜಾಕ್ಷಿ ದಂಪತಿಯ ಪುತ್ರ, ಬಂಟ್ವಾಳ ಎಸ್ ವಿ ಎಸ್ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಕೌಶಿಕ್ ಕೈಗಳ ಅಂಗ ವೈಕಲ್ಯತೆಯನ್ನು ಹೊಂದಿದ್ದು, ಕಾಲಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಇದೀಗ ರಾಜ್ಯ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರ ಗಮನವನ್ನೂ ಸೆಳೆದಿದ್ದಾರೆ.

ಕೌಶಿಕ್ ಕಾಲಿನಲ್ಲೇ ಪರೀಕ್ಷೆ ಬರೆಯುವ ಚಿತ್ರ ಸಮೇತ ಟ್ವೀಟ್ ಮಾಡಿರುವ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ “ಬಂಟ್ವಾಳ ತಾಲೂಕಿನ ಎಸ್‍ವಿಎಸ್ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ ಈ ಪೋರ ಕೌಶಿಕ್‍ನಿಗೆ ನನ್ನ ಹೃದಯಪೂರ್ವಕ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ” ಎಂದು ಟೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜೇಶ್ ಆಚಾರ್ಯ ಹಾಗೂ ಜಲಜಾಕ್ಷಿ ದಂಪತಿಯ ದ್ವಿತೀಯ ಪುತ್ರನಾಗಿರುವ ಕೌಶಿಕ್ ಹುಟ್ಟಿನಿಂದಲೇ ಕೈಗಳ ಅಂಗವೈಕಲ್ಯವನ್ನು ಹೊಂದಿದ್ದಾನೆ. ತನ್ನ ದೈಹಿಕ ವಿಕಲತೆಯ ಬಗ್ಗೆ ಎಂದಿಗೂ ಬದುಕಿನ ವಿಶ್ವಾಸ ಕಳೆದುಕೊಳ್ಳದ ಈ ಬಾಲಕ ತನ್ನ ಶಾಲಾರಂಭದ ದಿನಗಳಿಂದಲೇ ಕಾಲು ಬೆರಳುಗಳ ಮೂಲಕವೇ ಬರೆಯುತ್ತಾ ಮೇಲೇರಿ ಬಂದವನು. ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಕೌಶಿಕ್ ಸಾಧನೆ ಮಾಡಿದ್ದಾನೆ. ಕ್ರೀಡೆ, ಈಜು, ಡ್ರಾವಿಂಗ್ ಗಳಲ್ಲೂ ಕೌಶಿಕ್ ನೈಪುಣ್ಯತೆ ಮೆರೆದಿದ್ದಾನೆ.

ಇದೀಗ ಕೌಶಿಕ್‍ಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯ. ಬಂಟ್ವಾಳ ಎಸ್ ವಿ ಎಸ್ ಶಾಲೆಯಲ್ಲಿ ತನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಕೌಶಿಕ್ ಗುರುವಾರ ಆರಂಭಗೊಂಡ ಪರೀಕ್ಷೆಯಲ್ಲಿ ಕಾಲು ಬೆರಳುಗಳ ಮೂಲಕ ಪರೀಕ್ಷೆ ಬರೆಯುತ್ತಿರುವ ಚಿತ್ರವನ್ನು ಗಮನಿಸಿದ ರಾಜ್ಯ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಈತನ ಆತ್ಮ ವಿಶ್ವಾಸಕ್ಕೆ ಧೈರ್ಯ ತುಂಬುವ ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ಬಾಲಕನನ್ನು ಬೆಂಬಲಿಸಿದ್ದಾರೆ. ಅಂಗವೈಕಲ್ಯತೆಯನ್ನು ಸವಾಲಾಗಿ ಸ್ವೀಕರಿಸಿ ಬದುಕಿನ ಮಹತ್ವಪೂರ್ಣ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ಬಾಲಕ ಕೌಶಿಕ್‍ಗೆ ಕರಾವಳಿ ಟೈಮ್ಸ್ ಕೂಡಾ ಸುಂದರ ಭವಿಷ್ಯವನ್ನು ಹಾರೈಸುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕಾಲ್ಬೆರಳುಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಗಮನ ಸೆಳೆದ ಬಂಟ್ವಾಳದ ಕೌಶಿಕ್ Rating: 5 Reviewed By: karavali Times
Scroll to Top