ಗುರುಪುರ ಏಕಾಏಕಿ ಗುಡ್ಡಕುಸಿತ : ಮಣ್ಣಿನಡಿ ಸಿಲುಕಿದ್ದ ಬಾಲಕ-ಬಾಲಕಿ ದಾರುಣ ಸಾವು - Karavali Times ಗುರುಪುರ ಏಕಾಏಕಿ ಗುಡ್ಡಕುಸಿತ : ಮಣ್ಣಿನಡಿ ಸಿಲುಕಿದ್ದ ಬಾಲಕ-ಬಾಲಕಿ ದಾರುಣ ಸಾವು - Karavali Times

728x90

5 July 2020

ಗುರುಪುರ ಏಕಾಏಕಿ ಗುಡ್ಡಕುಸಿತ : ಮಣ್ಣಿನಡಿ ಸಿಲುಕಿದ್ದ ಬಾಲಕ-ಬಾಲಕಿ ದಾರುಣ ಸಾವು
ವಿಶ್ರಾಂತಿಗಾಗಿ ಮಲಗಿದ್ದ ಮಕ್ಕಳು ಮತ್ತೆ ಎದ್ದೇಳಲೇ ಇಲ್ಲ


ಮಂಗಳೂರು (ಕರಾವಳಿ ಟೈಮ್ಸ್) : ನಗರ ಹೊರವಲಯದ ಗುರುಪುರ-ಕೈಕಂಬ ಬಳಿಯಲ್ಲಿ ಗುಡ್ಡ ಕುಸಿತ ಸಂಭವಿಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಬಾಲಕ ಹಾಗೂ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಭಾನುವಾರ ಅಪರಾಹ್ನ ನಡೆದಿದೆ.

ಗುರುಪುರ-ಕೈಕಂಬದಲ್ಲಿ ಮನೆಗಳ ಹಿಂಭಾಗದ ಗುಡ್ಡ ಏಕಾಏಕಿ ಕುಸಿಯಲು ಆರಂಭವಾಗಿದ್ದು, ತಳದಲ್ಲಿದ್ದ ಮನೆ ಮಂದಿ ಆತಂಕದಿಂದ ಹೊರಗೋಡಿ ಬಂದಿದ್ದಾರೆ. ಈ ಸಂದರ್ಭ ಮನೆಯೊಂದರಲ್ಲಿ ಮಲಗಿದ್ದ ಬಾಲಕ ಸಫ್ವಾನ್ (16) ಹಾಗೂ ಆತನ ತಂಗಿ ಸಹಲಾ (10) ಮಣ್ಣಿನಡಿ ಸಿಲುಕಿದ್ದರು. ಸತತ ಐದು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಎನ್‍ಡಿಆರ್‍ಎಫ್ ಸಿಬ್ಬಂದಿ, ಪೆÇಲೀಸರು ಹಾಗೂ ಸ್ಥಳೀಯರು ಕೊನೆಗೂ ಮೃತದೇಹಗಳನ್ನು ಹೊರಗೆ ತೆಗೆಯಲು ಸಫಲರಾಗಿದ್ದಾರೆ.

ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ನಿರಂತರ ಗುಡ್ಡ ಕುಸಿತ ನಡೆದಿದ್ದರಿಂದ ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು ಟಿ ಖಾದರ್, ಮಾಜಿ ಶಾಸಕ ಮೊಯಿದಿನ್ ಬಾವಾ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಗುಡ್ಡದ ಸುತ್ತ ಮುತ್ತ ಇದ್ದ 15 ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನಾಳೆ ತಜ್ಞರ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತ್ ನಿರ್ಲಕ್ಷ್ಯವೇ ದುರಂತ ಘಟನೆಗೆ ಕಾರಣ ಎಂದು ಸ್ಥಳೀಯರು ಇದೇ ವೇಳೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಬಾರಿ ಇಲ್ಲಿಗೆ ತಡೆಗೋಡೆ ನಿರ್ಮಿಸಲು ಪಂಚಾಯತ್‍ಗೆ ಮನವಿ ಸಲ್ಲಿಸಲಾಗಿದೆಯಾದರೂ ಯಾವುದೇ ಸೂಕ್ತ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಇದೀಗ ಭಾರೀ ದೊಡ್ಡ ದುರಂತ ಸಂಭವಿಸಿದೆ. ತಕ್ಷಣ ಇಲ್ಲಿಗೆ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕು. ಮೃತ ಮಕ್ಕಳ ಕುಟುಂಬಕ್ಕೆ ಗರಿಷ್ಠ ಪರಿಹಾರವನ್ನು ಸರಕಾರ ಒದಗಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಗುರುಪುರ ಏಕಾಏಕಿ ಗುಡ್ಡಕುಸಿತ : ಮಣ್ಣಿನಡಿ ಸಿಲುಕಿದ್ದ ಬಾಲಕ-ಬಾಲಕಿ ದಾರುಣ ಸಾವು Rating: 5 Reviewed By: karavali Times
Scroll to Top