ಕೋವಿಡ್ ನೆಪದಲ್ಲಿ 7ನೇ ತರಗತಿ ಪುಸ್ತಕದ ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ ಹಾಕಿದ ಬಿಜೆಪಿ ಸರಕಾರ - Karavali Times ಕೋವಿಡ್ ನೆಪದಲ್ಲಿ 7ನೇ ತರಗತಿ ಪುಸ್ತಕದ ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ ಹಾಕಿದ ಬಿಜೆಪಿ ಸರಕಾರ - Karavali Times

728x90

28 July 2020

ಕೋವಿಡ್ ನೆಪದಲ್ಲಿ 7ನೇ ತರಗತಿ ಪುಸ್ತಕದ ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ ಹಾಕಿದ ಬಿಜೆಪಿ ಸರಕಾರಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಹಿನ್ನೆಲೆಯಲ್ಲಿ ಪಠ್ಯ ಕಡಿತ ಮಾಡುವ ನೆಪದಲ್ಲಿ ಸರಕಾರ 7ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು ಕೈಬಿಟ್ಟಿದ್ದು, 6 ಮತ್ತು 10ನೇ ತರಗತಿಯಲ್ಲಿ ಉಳಿಸಿಕೊಳ್ಳಲಾಗಿದೆ. 

ಕೊರೊನಾ ಹಿನ್ನೆಲೆಯಲ್ಲಿ ಶೇ.30 ರಷ್ಟು ಪಠ್ಯಗಳನ್ನು ಕಡಿತ ಮಾಡಲು ಸರಕಾರ ಮುಂದಾಗಿದೆ. ಹೀಗಾಗಿ 1 ರಿಂದ 10ನೇ ತರಗತಿವರೆಗೆ ಯಾವುದೇ ಪಾಠ ಅಥವಾ ಪಠ್ಯ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗುತ್ತಿದೆ. 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಒಂದು ಪಾಠವನ್ನು ಒಮ್ಮೆ ಮಾತ್ರ ಅಭ್ಯಾಸ ಮಾಡಲು ಅನುಕೂಲ ಆಗುವಂತೆ 7ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಕೈ ಬಿಡಲಾಗಿದೆ.

7ನೇ ತರಗತಿಯ 5ನೇ ಅಧ್ಯಾಯ ಮೈಸೂರಿನ ಒಡೆಯರ ಪರಿಚಯ ಪಾಠದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್, ಕಮಿಷನರ್‍ಗಳ ಆಡಳಿತ, ಮಾರ್ಕ್ ಕಬ್ಬನ್, ಲೂಯಿ ಬೆಂಥಾಯ್, ಬೌರಿಂಗ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆಗಳನ್ನು ತಿಳಿಸುವ ಪಾಠವಿತ್ತು.

ಪಠ್ಯದ ಬೋಧನಾ ಅವಧಿಯನ್ನು ತಾತ್ಕಾಲಿಕವಾಗಿ ಶಿಕ್ಷಣ ಇಲಾಖೆ ಕಡಿತ ಮಾಡಿದ ಹಿನ್ನೆಲೆಯಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್, ಮೈಸೂರಿನ ಚಾರಿತ್ರಿಕ ಸ್ಥಳಗಳು ಹಾಗೂ ಕಮಿಷನರ್ ಆಳ್ವಿಕೆ ಇರುವ ಪಠ್ಯವನ್ನು ಈ ವರ್ಷ ಕೈ ಬಿಡಲಾಗಿದೆ.

ಪಠ್ಯವನ್ನು ಕಡಿತ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಂಘಟನೆಯ ಅಧ್ಯಕ್ಷ ಶಶಿಕುಮಾರ್ ಪ್ರತಿಕ್ರಿಯಿಸಿ, ಶೇ. 30 ರಷ್ಟು ಕಡಿತ ಮಾಡಿರುವ ಸರಕಾರದ ಕ್ರಮ ಸರಿಯಲ್ಲ. ಅವಶ್ಯಕವಾಗಿ ಇರಬೇಕಾದ ಕೆಲ ಪಠ್ಯವನ್ನು ಕೈಬಿಡಲಾಗಿದೆ. ಮೈಸೂರು ಕುರಿತ ಇತಿಹಾಸದ ಪಠ್ಯವನ್ನು ಪಿಪಿಟಿ ಮಾದರಿಯಲ್ಲಿ ತೋರಿಸಿ ಎಂದು ಹೇಳಿದ್ದಾರೆ. ಟಿಪ್ಪು ಸುಲ್ತಾನ್, ಹೈದರ್ ಆಲಿ ಪಠ್ಯ ವಿಚಾರದಲ್ಲೂ ಸರಕಾರ ಬುದ್ಧಿವಂತಿಕೆಯಿಂದ ಪಠ್ಯವನ್ನು ಕೈ ಬಿಟ್ಟಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಟಿಪ್ಪು ಸುಲ್ತಾನ್ ಪಠ್ಯವನ್ನು ಕೈಬಿಡುವಂತೆ ಪತ್ರ ಬರೆದಿದ್ದರು. ಇತಿಹಾಸದ ಪಠ್ಯಗಳಲ್ಲಿ ಟಿಪ್ಪು ಸುಲ್ತಾನ್‍ನನ್ನು ಹೀರೋ ಎಂಬಂತೆ ಬಿಂಬಿಸಲಾಗಿದೆ. ಟಿಪ್ಪು ಸುಲ್ತಾನ್ ಧರ್ಮಾಂಧ ಹಾಗೂ ಕ್ರೂರಿಯಾಗಿದ್ದ. ಕೊಡಗಿನಲ್ಲಿ ಲಕ್ಷಾಂತರ ಮಂದಿಯನ್ನು ಮತಾಂತರ ಮಾಡುವುದರ ಜೊತೆಗೆ, ಹೆಣ್ಣುಬಾಕನಾದ ಆತ ಕೊಡವ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದ. ಭಾರತದಿಂದ ಬ್ರಿಟಿಷರನ್ನು ಓಡಿಸಲು ಆತ ಹೋರಾಟ ಮಾಡಲಿಲ್ಲ. ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ್ದ. ಈ ಕಾರಣಕ್ಕೆ ಸುಳ್ಳು ಅಧ್ಯಾಯಗಳನ್ನು ಪಾಠದಿಂದ ತೆಗೆಯಬೇಕೆಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ ಅಪ್ಪಚ್ಚು ರಂಜನ್ ಪತ್ರ ಬರೆದು ಈ ರೀತಿಯ ಬೇಡಿಕೆಯನ್ನು ಇಟ್ಟಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ನೆಪದಲ್ಲಿ 7ನೇ ತರಗತಿ ಪುಸ್ತಕದ ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ ಹಾಕಿದ ಬಿಜೆಪಿ ಸರಕಾರ Rating: 5 Reviewed By: karavali Times
Scroll to Top