ಬಂಟ್ವಾಳ (ಕರಾವಳಿ ಟೈಮ್ಸ್) : ಸಾವಿರಾರು ಸಂಖ್ಯೆಯ ಬಡ ವಿದ್ಯುತ್ ಮಾಪಕರ ಹಿತ ಕಡೆಗಣಿಸಿ ಯಾರೋ ಒಬ್ಬ ಗುತ್ತಿಗೆದಾರನ ಪಾದಕ್ಕೆ ಶರಣಾಗಿರುವ ಸರಕಾರ, ಮೆಸ್ಕಾಂ ಇಲಾಖೆಯ ಕಾರ್ಮಿಕ ವಿರೋಧಿ, ಬಡವರ ವಿರೋಧಿ ಹಾಗೂ ಜನ ವಿರೋಧಿ ನೀತಿಯ ವಿರುದ್ದ ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್‍ಗಳು ಮಂಗಳವಾರ ಬಿ ಸಿ ರೋಡಿನ ಮೆಸ್ಕಾಂ ಕಛೇರಿಯ ಮುಂಭಾಗ ಧರಣಿ ಪ್ರತಿಭಟನೆಗೆ ಚಾಲನೆ ನೀಡಿದರು.
ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರ ನೇತೃತ್ವದಲ್ಲಿ ನಡೆದ ಈ ಮೀಟರ್ ರೀಡರ್‍ಗಳ ಪ್ರತಿಭಟನೆಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಬೆಂಬಲ ನೀಡಿತು. ಈ ಸಂದರ್ಭ ಮಾತನಾಡಿದ ರಮಾನಾಥ ರೈ ಅವರು ಈ ಹಿಂದಿನ ಗುತ್ತಿಗೆದಾರರು ಮೀಟರ್ ರೀಡರ್‍ಗಳನ್ನು ಅವರ ಹಿತಾಸಕ್ತಿಗೆ ಅನುಗುಣವಾಗಿ ನಡೆಸಿಕೊಂಡು ನ್ಯಾಯೋಚಿತ ವೇತನವನ್ನೂ ನೀಡಿದ್ದಲ್ಲದೆ ಸಕಲ ಸೌಕರ್ಯಗಳನ್ನೂ ಒದಗಿಸಿದ್ದು, ಈಗಿನ ಗುತ್ತಿಗೆದಾರರು ಕೂಡಾ ಆ ಎಲ್ಲಾ ಸೌಲಭ್ಯವನ್ನು ಮುಂದುವರಿಸುವಂತೆ ಮೆಸ್ಕಾಂ ಇಲಾಖಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಸೇಸಪ್ಪ ಬೆದ್ರಕಾಡು ಮಾತನಾಡಿ, ಮೆಸ್ಕಾಂ ಮೀಟರ್ ರೀಡರ್‍ಗಳ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಮೆಸ್ಕಾಂ ಇಲಾಖಾಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆಯದೆ ಇದ್ದ ಹಿನ್ನಲೆಯಲ್ಲಿ ನ್ಯಾಯ ದೊರೆಯುವವರೆಗೂ ಅನಿರ್ದಿಷ್ಟಾವಧಿ ಧರಣಿ ಅನಿವಾರ್ಯ ಎಂದರು.
2008ರಲ್ಲಿ ಗುತ್ತಿಗೆದಾರರು ಕಡಿಮೆ ಮನೆಗಳ ಮಾಪಕ ಓದುತ್ತಿದ್ದ ಸಂದರ್ಭ ನೀಡಲಾಗುತ್ತಿದ್ದ ಕನಿಷ್ಠ ವೇತನಕ್ಕಿಂತ ಅತ್ಯಂತ ಕಡಿಮೆ ವೇತನ ಇಂದು 2020ರಲ್ಲಿ ಹೊಸ ಗುತ್ತಿಗೆದಾರರು ನೀಡುವುದಾಗಿ ತಿಳಿಸಿದ್ದಲ್ಲದೆ, ರೀಡರ್‍ಗಳಿಗೆ ಕಳೆದ ಎರಡು ತಿಂಗಳಿನಿಂದ ಬಾಕಿ ಇರುವ ವೇತನವನ್ನೂ ಪಾವತಿಸಿಲ್ಲ. ಬದಲಾದ ನೂತನ ಗುತ್ತಿಗೆದಾರರು ಮಾಪಕ ಓದುಗರ ಬದುಕಿನ ಜೊತೆಗೇ ಚೆಲ್ಲಾಟ ನಡೆಸುವ ಮೂಲಕ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಸರಕಾರವೂ ಗರಿಷ್ಠ ಸಂಖ್ಯೆಯಲ್ಲಿರುವ ವಿದ್ಯುತ್ ಮಾಪಕ ಓದುಗರನ್ನು ಕಡೆಗಣಿಸಿ ಒಬ್ಬ ಗುತ್ತಿಗೆದಾರನ ಪಾದಕ್ಕೆ ಶರಣಾಗುವ ಮೂಲಕ ಬಡವರ, ಕಾರ್ಮಿಕರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ತಪ್ಪು ನೀತಿಯಿಂದಾಗಿ ಕಳೆದ 20 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಮಾಪಕ ಓದುಗರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಬದುಕು ಡೋಲಾಯಮಾನವಾಗಿದ್ದು, ವಿದ್ಯುತ್ ಮಾಪಕ ಓದುಗರ ಬದುಕುವ ಹಕ್ಕಿನ ವಿರುದ್ದವಾಗಿರುವ ಈ ಎಲ್ಲಾ ಸಮಸ್ಯೆಗಳಿಗೆ ಸರಕಾರ, ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತವಾಗಿ ಶೀಘ್ರದಲ್ಲಿ ಸ್ಪಂದಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
0 comments:
Post a Comment