ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮಕ್ಕೆ ಕಳೆದ ಎರಡು-ಮೂರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಪರಿಸರವಾಸಿಗಳು ತೀವ್ರ ನೀರಿನ ಬವಣೆ ಎದುರಿಸುತ್ತಿದ್ದಾರೆ. ಪುರಸಭೆ ಹಾಗೂ ಸಮಗ್ರ ಕುಡಿಯುವ ನೀರು ಯೋಜನೆಯ ಅಧಿಕಾರಿಗಳ ಮಧ್ಯೆ ಇರುವ ಹೊಂದಾಣಿಕೆಯ ಕೊರತೆಯಿಂದಾಗಿ ಈ ರೀತಿಯ ನೀರಿನ ಸಮಸ್ಯೆ ತಲೆದೋರಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಾಣೆಮಂಗಳೂರು ಪರಿಸರಕ್ಕೆ ನಿತ್ಯ ನಿರಂತರವಾಗಿ ಬರುತ್ತಿದ್ದ ಕುಡಿಯುವ ನೀರು ಕಳೆದ ಮೂರು ತಿಂಗಳಿನಿಂದ ಸರಿಯಾಗಿ ನೀರೇ ಬರುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಪುರಸಭೆ ಹಾಗೂ ಸಮಗ್ರ ಕುಡಿಯುವ ನೀರಿನ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪೂರ್ಣ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಪಾಣೆಮಂಗಳೂರು ಪೇಟೆಯಲ್ಲಿ ನಿರಂತರವಾಗಿ ಪೈಪ್ ಒಡೆದು ಹೋಗುವ ಪರಿಣಾಮ ಈ ರೀತಿಯ ನೀರಿನ ಸಮಸ್ಯೆ ಎದುರಾಗುತ್ತಿದೆ ಎನ್ನಲಾಗಿದೆ. ಈ ಪೈಪ್ ಒಡೆದು ಹೋಗುವ ಬಗ್ಗೆ ತಾತ್ಕಾಲಿಕ ತೇಪೆ ಕಾಮಗಾರಿ ನಡೆಸಲಾಗುತ್ತಿದೆಯಾದರೂ ಅದು ನಿಲ್ಲದೆ ಮತ್ತೆ ಪೈಪ್ ಒಡೆದು ಹೋಗುವ ಮೂಲಕ ಸಮಸ್ಯೆ ನಿರಂತರವಾಗಿರುತ್ತಿತ್ತು.
ಕೊನೆಗೂ ಮಂಗಳವಾರ ಈ ಭಾಗದ ಇಬ್ಬರು ಕೌನ್ಸಿಲರ್ ಗಳಾದ ಅಬೂಬಕ್ಕರ್ ಸಿದ್ದೀಕ್ ಹಾಗೂ ಇದ್ರೀಸ್ ಪಿ ಜೆ ಅವರು ಭಾರೀ ಶ್ರಮಪಟ್ಟು ಮತ್ತೆ ಇಲ್ಲಿನ ಪೈಪ್ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನ ನಡೆಸಿದ ಪರಿಣಾಮ ನೀರು ಸರಾಗವಾಗಿ ಸರಬರಾಜಾಗುತ್ತಿದೆ. ಆದರೂ ಇದು ಶಾಶ್ವತ ಪರಿಹಾರ ಅಲ್ಲ ಎನ್ನುವ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಿ ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಕಾಯಕಲ್ಪ ಒದಗಿಸುವಂತೆ ಆಗ್ರಹಿಸಿದ್ದಾರೆ.
0 comments:
Post a Comment