ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ಜೀವನದಿ ನೇತ್ರಾವತಿ ತುಂಬಿ ಹರಿಯುತ್ತಿದೆ. ತಾಲೂಕಿನ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೆ ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮಿಲಿಟ್ರಿ ಕ್ಯಾಂಪಿಂಗ್ ಮೈದಾನದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿರುವ ನಿವಾಸಿಗಳು ಬುಧವಾರ ತಡ ರಾತ್ರಿ ವೇಳೆಗೆ ತಮ್ಮ ಸಾಮಾನು-ಸರಂಜಾಮುಗಳೊಂದಿಗೆ ಹೊರಟಿದ್ದಾರೆ. ನೇತ್ರಾವತಿ ನದಿ ನೀರಿನ ಮಟ್ಟ ಗುರುವಾರ ಬೆಳಿಗ್ಗೆ 7.5 ಮೀಟರ್‍ವರೆಗೂ ಏರಿಕೆಯಾಗಿ ಪ್ರವಾಹ ಭೀತಿ ಉಂಟಾಗಿತ್ತು. ಬಳಿಕ ಮಳೆ ಪ್ರಮಾಣ ಇಳಿಮುಖವಾದ ಪರಿಣಾಮ ನದಿ ನೀರಿನ ಮಟ್ಟದಲ್ಲೂ ಮಧ್ಯಾಹ್ನದ ಬಳಿಕ ಇಳಿಕೆಯಾಗಿದೆ.
ವ್ಯಾಪಕ ಮಳೆಗೆ ತಾಲೂಕಿನ ವಿವಿಧೆಡೆ ಮಳೆಹಾನಿ ಪ್ರಕರಣಗಳು ದಾಖಲಾಗಿದ್ದು, ಪುದು ಗ್ರಾಮದ ಹೊನ್ನಮ್ಮ, ಜಮೀಳಾ ಹಾಗೂ ಶಾಹಿದ್ ಎಂಬವರ ಮನೆಗಳಿಗೆ ಭಾಗಶಃ ಹಾನಿ, ಇಡ್ಕಿದು ಗ್ರಾಮದ ಸುಶೀಲ ಎಂಬವರ ಕಚ್ಚಾ ಮನೆ ಸಂಪೂರ್ಣ ಹಾನಿ, ಮಾಣಿ ಆರೋಗ್ಯ ಕೇಂದ್ರದ ಮೇಲೆ ಮರ ಬಿದ್ದು ಹಾನಿ, ಕೆದಿಲ ಗ್ರಾಮದ ಬೀಪಾತಿಮ ಎಂಬವರ ಮನೆಗೆ ಬಾಗಶಃ ಹಾನಿ, ವಿಟ್ಲಪಡ್ನೂರು ಗ್ರಾಮದ ನಿವಾಸಿ ಸೇಸಪ್ಪ ಬೆದ್ರಕಾಡು ಅವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ ಎಂದು ತಾಲೂಕು ಕಛೇರಿ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷವೂ ಈ ಅವಧಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಭಾರೀ ಮಳೆ ಬಂದಿದ್ದು, ನದಿಯಲ್ಲಿ ಪ್ರವಾಹವೇ ಬಂದಿತ್ತು. ಹಲವು ರಸ್ತೆ, ಸೇತುವೆಗಳು ಮುಳುಗಿ ಸಂಚಾರ ಕಡಿತಗೊಂಡಿತ್ತು. ಹಲವು ಮನೆಗಳು ಜಲಾವೃತಗೊಂಡ ಪರಿಣಾಮ ನಿವಾಸಿಗಳು ಗುಳೆ ಹೊರಟಿದ್ದರು.
0 comments:
Post a Comment