ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ ಪಾಸಿಟಿವ್ ಬಾಧಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗುಣಮುಖರಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಶಾಸಕ ಜಮೀರ್ ಅಹ್ಮದ್ ಖಾನ್, ತಮ್ಮ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೂ ಮತ್ತು ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
'ಇಂದು ಕೊರೊನಾ ಸೋಂಕಿನಿಂದ ಗುಣಮುಖನಾಗಿ ಮನೆಗೆ ಮರಳುತ್ತಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ಮುಂದಿನ 10 ದಿನಗಳ ಕಾಲ ನಾನು ಹೋಂ ಕ್ವಾರೆಂಟೈನ್‍ನಲ್ಲಿ ಇರಲಿದ್ದು, ನಂತರದಲ್ಲಿ ಸಕ್ರಿಯ ಜನಸೇವೆಗೆ ಮರಳಲಿದ್ದೇನೆ. ಈವರೆಗೆ ಅತ್ಯಂತ ಕಾಳಜಿಯಿಂದ ನನಗೆ ಚಿಕಿತ್ಸೆ ನೀಡಿದ ವಿಕ್ರಂ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ, 'ನಾನು ಆಸ್ಪತ್ರೆಗೆ ದಾಖಲಾದ ದಿನವೇ ಕರೆ ಮಾಡಿ, ನನಗೆ ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಆತ್ಮೀಯರು, ನಮ್ಮ ಪಕ್ಷದ ಹಿರಿಯ ನಾಯಕರೂ ಆದ ಸಿದ್ದರಾಮಯ್ಯನವರಿಗೂ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರಿಗೂ ಧನ್ಯವಾದಗಳು. ತಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಆಭಾರಿ ಎಂದು ಹೇಳಿದ್ದಾರೆ.
ಅಲ್ಲದೆ ನಾನು ಶೀಘ್ರ ಗುಣಮುಖನಾಗುವಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರು ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಪ್ರಾರ್ಥನೆ, ಹರಕೆ, ಪೂಜೆಗಳನ್ನು ಮಾಡಿದ್ದಾರೆ. ತಮ್ಮೆಲ್ಲರ ಪ್ರೀತಿಯ ಋಣ ದೊಡ್ಡದು. ತಮ್ಮ ಸೇವೆಯ ಮೂಲಕ ಅದನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
0 comments:
Post a Comment