ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಗೂಡಿನಬಳಿಯಲ್ಲಿರುವ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಔಟ್ ಗೋಯಿಂಗ್ ಸ್ಟೂಡೆಂಟ್ಸ್ (ನಿರ್ಗಮನ ವಿದ್ಯಾರ್ಥಿಗಳು) ಒಟ್ಟು ಸೇರಿ ತಾವು ವಿದ್ಯೆ ಕಲಿತ ಸಂಸ್ಥೆಯ ಋಣ ತೀರಿಸುವ ಪ್ರಯತ್ನ ನಡೆಸಿದ್ದು, ಬಣ್ಣ ಕಳೆದುಕೊಂಡ ಕಾಲೇಜಿನ ಗೋಡೆಗಳಿಗೆ ತಾವೇ ಪೈಂಟಿಂಗ್ ನಡೆಸಿ ಸುದ್ದಿಯಾಗಿದ್ದಾರೆ.
ವಿದ್ಯಾರ್ಥಿಗಳಾದ ಸೂರ್ಯ, ರಕ್ಷಿತ್, ಚಿತ್ರೇಶ್, ಧೀರಜ್, ಸಂಪತ್, ಲವೇಶ್ ಹಾಗೂ ಭುವನೇಶ್ ಬಂಗೇರ ಈ ಏಳು ಮಂದಿ ವಿದ್ಯಾರ್ಥಿಗಳು ಕಾಲೇಜು ಕಟ್ಟಡಕ್ಕೆ ಸ್ವತಃ ತಾವೇ ಮುಂದೆ ಬಂದು ಬಣ್ಣ ಬಳಿದು ತಾವು ಕಲಿತ ಕಾಲೇಜು ಕಟ್ಟಡದ ಸೌಂದರ್ಯ ವೃದ್ದಿಸಲು ಸಹಕರಿಸಿದ್ದಾರೆ.
ಕಾಲೇಜು ರಜಾ ಅವಧಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡು ಕೌಶಲ್ಯ ಬೆಳೆಸಿಕೊಂಡಿದ್ದ ಈ ವಿದ್ಯಾರ್ಥಿಗಳು ಕಾಲೇಜಿನ ಎನ್ ಎಸ್ ಎಸ್ ಘಟಕದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಸೇವಾ ಮನೋಭಾವಕ್ಕೆ ವೇಗ ಹೆಚ್ಚಿಸಿಕೊಂಡಿದ್ದರು.
ವಿದ್ಯಾರ್ಥಿಗಳ ವಿದ್ಯಾಸಂಸ್ಥೆ ಮೇಲಿನ ಈ ಪ್ರೀತಿಗೆ ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ ಅವರು ಹ್ಯಾಟ್ಸಪ್ ಎಂದಿದ್ದಾರೆ. ದ್ವಿತೀಯ ಪಿಯಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳೇ ದೇಣಿಗೆ ನೀಡಿದ್ದ ಏಳೂವರೆ ಸಾವಿರ ರೂಪಾಯಿ ಮೊತ್ತಕ್ಕೆ, ಕಾಲೇಜು ಉಪನ್ಯಾಸ ವೃಂದ ನೀಡಿದ ಕೊಡುಗೆ ಸೇರಿಸಿ ಜಮೆಯಾದ ಒಟ್ಟು 25 ಸಾವಿರ ರೂಪಾಯಿ ಮೊತ್ತದಲ್ಲಿ ಪೈಂಟಿಂಗ್ ಕಾರ್ಯಕ್ಕೆ ಬೇಕಾದ ಪೈಂಟ್, ಬ್ರಶ್ ಮೊದಲಾದ ಕಚ್ಚಾ ವಸ್ತುಗಳನ್ನು ಖರೀದಿಸಲಾಗಿದೆ.
ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ, ಉಪನ್ಯಾಸಕರಾದ ಬಾಲಕೃಷ್ಣ ನಾಯಕ್, ಅಬ್ದುಲ್ ರಝಾಕ್, ದಾಮೋದರ ಮೊದಲಾದವರು ವಿದ್ಯಾರ್ಥಿಗಳ ಈ ಸೇವೆಗೆ ಸಾಥ್ ನೀಡಿದ್ದಾರೆ.
0 comments:
Post a Comment