ಬೆಂಗಳೂರು, ಅ. 19, 2020 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಅಂಕಪಟ್ಟಿ ದ್ವಿಪ್ರತಿ ಪಡೆಯಲು ಇನ್ನು ಮುಂದೆ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ನೇರವಾಗಿ ತೆರಳಿ ಅರ್ಜಿ ಸಲ್ಲಿಸಿ, ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಐದು ದಿನಗಳಲ್ಲೇ ಅಂಕಪಟ್ಟಿ ದ್ವಿಪ್ರತಿ ನೀಡಲು ಶಿಕ್ಷಣ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.
ಇದಕ್ಕಾಗಿ ಶಿಕ್ಷಣ ಇಲಾಖೆ ಡಿಜಿಟಲ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಆನ್‍ಲೈನ್ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ದಾಖಲೆಗಳನ್ನು ನೀಡಬಹುದಾಗಿದೆ. ಅರ್ಜಿ ಸಲ್ಲಿಸಿದ ಕೇವಲ 5 ದಿನಗಳಲ್ಲೇ ವಿದ್ಯಾರ್ಥಿಗೆ ಅಂಕಪಟ್ಟಿಯ ದ್ವಿಪ್ರತಿ ದೊರೆಯಲಿದೆ.
ಈ ಮೊದಲು ಜನರು ಸ್ವತಃ ಶಿಕ್ಷಣ ಮಂಡಳಿಗೆ ತೆರಳಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಈ ಅರ್ಜಿಗಳು ತಲುಪಲು ತಿಂಗಳಾನುಗಟ್ಟಲೆ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ತತ್ಕಾಲ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಆನ್‍ಲೈನ್ ಮೂಲಕ ಅಥವಾ ಬ್ಯಾಂಕ್ ಇನ್ನಿತರ ವ್ಯವಸ್ಥೆಗಳ ಮೂಲಕ ಪಾವತಿ ಮಾಡಬಹುದಾಗಿದೆ. ಬಳಿಕ ವಿದ್ಯಾರ್ಥಿಗಳು ತಾವು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ತಮ್ಮ ಶಾಲೆಗಳ ಮುಖ್ಯಸ್ಥರಿಗೆ ಸಲ್ಲಿಸಬೇಕಿದೆ. ಇದಾದ ಬಳಿಕ ಐದು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನ್‍ಲೈನ್ ಮೂಲಕವೇ ಶಾಲಾ ಮುಖ್ಯಸ್ಥರು, ಬಿಇಒ ಹಾಗೂ ಡಿಡಿಪಿಐ ಹಂತದಲ್ಲಿ ಪರಿಶೀಲನೆಗಳು ನಡೆಯಲಿವೆ. ಅರ್ಜಿ ಸಲ್ಲಿಸಿದ ಐದು ದಿನಗಳಲ್ಲಿ ಅಂಕ ಪಟ್ಟಿ ಶಾಲೆಯ ಮುಖ್ಯಸ್ಥರ ಕಚೇರಿಗೆ ತಲುಪಲಿದೆ. ಒಂದು ವೇಳೆ ತುರ್ತಾಗಿ ಬೇಕಿಲ್ಲದಿದ್ದರೆ ಅಂಕಪಟ್ಟಿಗಳು 30 ದಿನಗಳಲ್ಲಿ ಸಿಗಲಿದೆ. ಒಬ್ಬ ವಿದ್ಯಾರ್ಥಿ ನಾಲ್ಕು ಬಾರಿ ಅಂಕಪಟ್ಟಿಯ ದ್ವಿಪ್ರತಿ ಪಡೆಯಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆಯ ವರದಿಗಳು ತಿಳಿಸಿವೆ.
0 comments:
Post a Comment