ದ್ವಿತೀಯ ಸೂಪರ್ ಓವರಿನಲ್ಲಿ ಪಂಜಾಬ್ ತಂಡಕ್ಕೆ ಮೇಲುಗೈ
ಮುಂಬೈ ತಂಡದ ಸತತ ಗೆಲುವಿಗೆ ಬ್ರೇಕ್ ಹಾಕಿದ ಪಂಜಾಬ್
ಅಬುಧಾಬಿ, ಅ. 19, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ದ್ವಿತೀಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದು, ಪಂದ್ಯಾಟ ಟೈ ಅಗಿದ್ದು, ಬಳಿಕ ಮೊದಲ ಸೂಪರ್ ಓವರ್ ಕೂಡಾ ಸಮಬಲದಲ್ಲಿ ಅಂತ್ಯಗೊಂಡು ಎರಡೂ ತಂಡಗಳು ಸಮಬಲದ ಹೋರಾಟ ನೀಡಿದೆ. ಬಳಿಕ ದ್ವಿತೀಯ ಸೂಪರ್ ಓವರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರೋಮಾಂಚಕ ಗೆಲುವು ಸಾಧಿಸಿದೆ. ಈ ಮೂಲಕ ಮುಂಬೈ ತಂಡದ ಸತತ 5 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಪಂಜಾಬ್ ಕಡಿವಾಣ ಹಾಕಿದೆ.
ಪಂದ್ಯದ ಕೊನೆಯ ಎರಡು ಓವರಿನಲ್ಲಿ ಪಂಜಾಬ್ ಗೆಲ್ಲಲು 22 ರನ್‍ಗಳ ಅವಶ್ಯಕತೆ ಇತ್ತು. 19ನೇ ಓವರಿನಲ್ಲಿ ಪಂಜಾಬ್‍ಗೆ 13 ರನ್ ಬಂತು. ಕೊನೆಯ ಓವರಿನಲ್ಲಿ 9 ರನ್ ಬೇಕಿತ್ತು. ಈ ವೇಳೆ 20ನೇ ಓವರಿನಲ್ಲಿ ಟ್ರೆಂಟ್ ಬೌಲ್ಟ್, ಎಸೆದ ಮೊದಲ ಎಸೆತದಲ್ಲಿ ದೀಪಕ್ ಹೂಡಾ ಒಂಟಿ ರನ್ ಕಸಿದರು. 2ನೇ ಎಸೆತದಲ್ಲಿ ಕ್ರಿಸ್ ಜೋರ್ಡನ್ ಬೌಂಡರಿ ಬಾರಿಸಿದರು. 3ನೇ ಎಸೆತದಲ್ಲಿ ಮತ್ತೆ ಒಂಟಿ ರನ್. 4ನೇ ಎಸೆತ ಡಾಟ್ ಬಾಲ್ ಆಗಿ ಪರಿಣಮಿಸಿತು. 5ನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಎಸೆತದಲ್ಲಿ 2 ರನ್ ಅವಶ್ಯಕತೆ ಇದ್ದಾಗ ಒಂದು ರನ್ ಪೂರ್ಣಗೊಳಿಸಿ 2ನೇ ರನ್ ಓಟದಲ್ಲಿದ್ದಾಗ ಜಾರ್ಡನ್ ರನೌಟ್ ಆದರು. ಈ ಮೂಲಕ ಪಂದ್ಯ ರೋಮಾಂಚಕ ಟೈ ಆಗಿ ಮುಕ್ತಾಯಗೊಂಡು ಸೂಪರ್ ಓವರ್ ಮೊರೆ ಹೋಗಲಾಯಿತು.
ಸೂಪರ್ ಓವರ್‍ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಜಸ್ಪ್ರೀತ್ ಬುಮ್ರಾ ಎಸೆತಗಾರಿಕೆ ನಡೆಸಿದರು. ಮೊದಲ ಎಸೆತದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ದಾಂಡಿಗ ರಾಹುಲ್ ಒಂಟಿ ಓಟ ಪೂರ್ತಿಗೊಳಿಸಿದರು. 2ನೇ ಎಸೆತದಲ್ಲಿ ನಿಕೋಲಸ್ ಪೂರನ್ ಔಟಾಗಿ ಹೊರನಡೆದುರ. 3ನೇ ಎಸೆತದಲ್ಲಿ ಮತ್ತೆ ಒಂಟಿ ರನ್. 4ನೇ ಎಸೆತದಲ್ಲೂ ಸಿಂಗಲ್ ರನ್. 5ನೇ ಎಸೆತದಲ್ಲಿ ರಾಹುಲ್ ಎರಡು ರನ್ ತೆಗೆದರು. ಕೊನೆಯ ಎಸೆತದಲ್ಲಿ ರಾಹುಲ್ ಔಟ್ ಆದರು. ಈ ಮೂಲಕ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವಿಗೆ 6 ರನ್‍ಗಳ ಗುರಿ ನಿಗದಿಪಡಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದಿಂದ ಆರಂಭಿಕರಾಗಿ ಕ್ರೀಸಿಗೆ ಬಂದ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಅವರು ಪಂಜಾಬ್ ತಂಡದ ದಾಳಿಗಾರ ಮುಹಮ್ಮದ್ ಶಮಿ ಅವರ ಮೊದಲ 3 ಎಸೆತಗಳಲ್ಲಿ ಒಂಟಿ ರನ್ ಗಳಿಸಿದರು. 4ನೇ ಎಸೆತ ಡಾಟ್ ಬಾಲ್. 5ನೇ ಎಸೆತದಲ್ಲಿ ಮತ್ತೆ ಒಂಟಿ ರನ್ ಬಂತು. ಕೊನೆಯ ಎಸೆತದಲ್ಲಿ 2 ರನ್ ಅವಶ್ಯಕತೆ ಇದ್ದಾಗ ಡಿ ಕಾಕ್ ರನೌಟ್ ಆದರು. ಈ ಮೂಲಕ ಮೊದಲ ಸೂಪರ್ ಕೂಡಾ ಟೈ ಆಗಿ ಕೊನೆಗೊಂಡು ಎರಡೂ ತಂಡಗಳು ಮತ್ತೆ ಸಮಬಲದ ಹೋರಾಟವನ್ನೇ ನೀಡಿದ ಪರಿಣಾಮ ಫಲಿತಾಂಶಕ್ಕಾಗಿ ದ್ವಿತೀಯ ಸೂಪರ್ ಓವರ್ ಮೊರೆ ಹೋಗಬೇಕಾಯಿತು.
ಹೊಸ ನಿಯಮದಂತೆ ಮತ್ತೆ ಸೂಪರ್ ಓವರ್ ಆಟ ಆರಂಭವಾಗಿ ಪಂಜಾಬ್ ಪರ ಕ್ರಿಸ್ ಜೋರ್ಡಾನ್ ಅವರು ಸೂಪರ್ ಓವರ್ ಬೌಲ್ ಮಾಡಿದರು. ಮೊದಲ ಎಸೆತ ವೈಡ್ ಬಾಲ್. ನಂತರದ ಎರಡು ಎಸೆತಗಳಲ್ಲಿ ಒಂಟಿ ರನ್ ಬಂತು. 3 ನೇ ಎಸೆತವನ್ನು ಕೀರನ್ ಪೆÇಲಾರ್ಡ್ ಬೌಂಡರಿಗಟ್ಟಿದರು. 4ನೇ ಎಸೆತ ಮತ್ತೆ ವೈಡ್. 4ನೇ ಬಾಲ್ ಒಂಟಿ ಓಟ ಹಾಗೂ ಹಾರ್ದಿಕ್ ಪಾಂಡ್ಯ ಔಟ್ ಆದರು. 5ನೇ ಎಸೆತ ಡಾಟ್ ಬಾಲ್. ಕೊನೆಯ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅವರ ಉತ್ತಮ ಕ್ಷೇತ್ರ ರಕ್ಷಣೆಯಿಂದ ಸಿಕ್ಸರ್ ಆಗುವ ಚೆಂಡು ತಡೆದ ಕೇವಲ 2 ರನ್ ಮಾತ್ರ ಬಿಟ್ಟುಕೊಟ್ಟ ಪರಿಣಾಮ ಮುಂಬೈ ಇಂಡಿಯನ್ಸ್ ಒಟ್ಟು ಗಳಿಕೆ 11 ರನ್.
12 ರನ್‍ಗಳ ಟಾರ್ಗೆಟ್ ಸ್ವೀಕರಿಸಿದ ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಮಯಾಂಕ್ ಅಗರವಾಲ್ ಅವರು ಮುಂಬೈ ತಂಡದ ದಾಳಿಗಾರ ಟ್ರೆಂಟ್ ಬೌಲ್ಟ್ ಅವರನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಓವರಿನ ಮೊದಲ ಎಸೆತವನ್ನೇ ಕ್ರಿಸ್ ಗೇಲ್ ಸಿಕ್ಸರ್‍ಗೆ ಅಟ್ಟಿದರು. 2ನೇ ಎಸೆತದಲ್ಲಿ ಒಂಟಿ ರನ್ ಬಂತು. 3ನೇ ಎಸೆತವನ್ನು ಮಯಾಂಕ್ ಅಗರ್ವಾಲ್ ಬೌಂಡರಿಗಟ್ಟಿದರು. ಬಳಿಕ ಗೆಲುವಿಗೆ ಒಂದು ರನ್ ಅವಶ್ಯಕತೆ ಇದ್ದಾಗ 4ನೇ ಎಸೆತವನ್ನೂ ಕೂಡ ಮಯಾಂಕ್ ಬೌಂಡರಿಗಟ್ಟಿ 2 ಎಸೆತ ಬಾಕಿ ಇರುತ್ತಲೇ ಪಂಜಾಬ್‍ಗೆ ಜಯ ತಂದುಕೊಟ್ಟರು.
ಸೂಪರ್ ಓವರ್ ನಿಯಮದಂತೆ ಒಂದು ಪಂದ್ಯದಲ್ಲಿ ಎರಡು ಸೂಪರ್ ಓವರ್ ಬಂದರೆ ಎರಡು ತಂಡದಲ್ಲಿ ಮೊದಲ ಸೂಪರ್ ಓವರಿನಲ್ಲಿ ಬೌಲ್ ಮಾಡಿದ ಬೌಲರ್ ಮತ್ತು ಬ್ಯಾಟ್ ಮಾಡಿದ ಬ್ಯಾಟ್ಸ್ ಮ್ಯಾನ್‍ಗಳು ಮತ್ತೆ ಬೌಲ್ ಆಥವಾ ಬ್ಯಾಟ್ ಮಾಡುವಂತಿಲ್ಲ. ಈ ಕಾರಣಕ್ಕೆ ಎರಡನೇ ಸೂಪರ್ ಓವರಿನಲ್ಲಿ ಬುಮ್ರಾ ಮತ್ತು ಶಮಿ ಮತ್ತೆ ಬೌಲ್ ಮಾಡಲಿಲ್ಲ. ಅಂತಯೇ ರಾಹುಲ್ ಹಾಗೂ ರೋಹಿತ್ ಬ್ಯಾಟಿಂಗ್ ಮಾಡಲಿಲ್ಲ.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿ ಕಾಕ್ ಅವರ ಅರ್ಧ ಶತಕ ಮತ್ತು ಕೊನೆಯಲ್ಲಿ ಕೀರನ್ ಪೆÇಲಾರ್ಡ್ ಅವರ ಸ್ಫೋಟಕ ಆಟದಿಂದ ನಿಗದಿತ 20 ಓವರಿನಲ್ಲಿ 176 ರನ್‍ಗಳ ಟಾರ್ಗೆಟ್ ನೀಡಿತ್ತು.
0 comments:
Post a Comment