ಪೂರನ್ ಅರ್ಧಶತಕದ ಮುಂದೆ ಮಂಕಾದ ಧವನ್ ದಾಖಲೆಯ ಶತಕ - Karavali Times ಪೂರನ್ ಅರ್ಧಶತಕದ ಮುಂದೆ ಮಂಕಾದ ಧವನ್ ದಾಖಲೆಯ ಶತಕ - Karavali Times

728x90

20 October 2020

ಪೂರನ್ ಅರ್ಧಶತಕದ ಮುಂದೆ ಮಂಕಾದ ಧವನ್ ದಾಖಲೆಯ ಶತಕ

 




 ಡೆಲ್ಲಿ ವಿರುದ್ದ ಪಂಜಾಬ್ ಗೆ 5 ವಿಕೆಟ್ ಜಯ


ಅಬುಧಾಬಿ, ಅ. 21, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಡೆಲ್ಲಿ ವಿರುದ್ದ ಐದು ವಿಕೆಟ್ ಗಳ ಜಯಭೇರಿ ಭಾರಿಸುವ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದು, ಪ್ಲೇ ಅಪ್ ಕನಸು ಜೀವಂತವಿರಿಸಿಕೊಂಡಿದೆ.

165 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಪಂಜಾಬ್ ಪರ ನಿಕೊಲಸ್ ಪೂರನ್ ಅರ್ಧ ಶತಕ ಗಳಿಸಿದರೆ, 13 ಎಸೆತಗಳಲ್ಲಿ 29 ಗಳಿಸಿದ ಕ್ರಿಸ್ ಗೇಲ್ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 1 ಓವರ್ ಬಾಕಿ ಇರುತ್ತಲೇ 5 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ  ಪಂಜಾಬ್ ತಂಡ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2ನೇ ಓವರಿನಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನು ಕಳೆದುಕೊಂಡಿತ್ತು. ಆ ಬಳಿಕ ಕಣಕ್ಕಿಳಿದ ಗೇಲ್ ಎಂದಿನಂತೆ ತಮ್ಮ ಹೊಡಿಬಡಿ ಆಟದ ಮೂಲಕ ಸ್ಫೋಟಕ ಪ್ರದರ್ಶನ ನೀಡಿದರು. ತುಷಾರ್ ದೇಶಪಾಂಡೆ ಎಸೆತ 5ನೇ ಓವರಿನಲ್ಲಿ 2 ಸಿಕ್ಸರ್, 3 ಬೌಂಡರಿಗಳೊಂದಿಗೆ 26 ರನ್ ಸಿಡಿಸಿದ್ದರು. ಈ ಬಾರಿಯ ಟೂರ್ನಿಯ ಪವರ್ ಪ್ಲೇ ಓವರ್ ಒಂದರಲ್ಲಿ ಮೂಡಿಬಂದ ಅತ್ಯಧಿಕ ರನ್ ಇದಾಗಿದೆ. ಇದಕ್ಕೂ ಮುನ್ನ ಸಿಎಸ್‍ಕೆ ವಿರುದ್ಧ ಖಲೀಲ್ 22 ರನ್ ಬಿಟ್ಟುಕೊಟ್ಟಿದ್ದರು. ಆದರೆ ಸ್ಫೋಟಕ ಆಟದೊಂದಿಗೆ ಮುನ್ನುತ್ತಿದ್ದ ಗೇಲ್‍ರನ್ನು ಕ್ಲೀನ್ ಬೌಲ್ಡ್ ಮಾಡಿದ ಅಶ್ವಿನ್ ಪಂಜಾಬ್ ತಂಡಕ್ಕೆ ಭಾರೀ ಹೊಡೆತ ನೀಡಿದರು. ಇದರ ಬೆನ್ನಲ್ಲೇ ಮಯಾಂಕ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಈ ವೇಳೆ 56 ರನ್ ಗಳಿಸಿದ್ದ ಪಂಜಾಬ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು.

ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದ ಪೂರನ್ ಅರ್ಧ ಶತಕ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಪೂರನ್ ಗೆ ಉತ್ತಮ ಸಾಥ್ ನೀಡಿದ ಮ್ಯಾಕ್ಸ್ ವೇಲ್ 32 ಗಳಿಸಿ ಔಟಾದರು. ಅಂತಿಮ ಹಂತದಲ್ಲಿ 24 ಎಸೆತಗಳಲ್ಲಿ 17 ರನ್ ಗಳಿಸಬೇಕಿದ್ದ ಸಂದರ್ಭದಲ್ಲಿ ಕ್ರೀಸಿಗೆ ಬಂದ ದೀಪಕ್ ಹೂಡಾ 15 ರನ್, ನೀಶಾಮ್ 10 ರನ್ ಗಳಿಸಿ 19 ಓವರಿನ ಕೊನೆಯ ಎಸೆದಲ್ಲಿ ತಂಡಕ್ಕೆ ತಂದುಕೊಟ್ಟರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಟೂರ್ನಿಯಲ್ಲಿ ಸತತ ಎರಡು ಶತಕ ಗಳಿಸಿದ ಧವನ್ ಪಂದ್ಯದಲ್ಲಿ 61 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.

ಪೃಥ್ವಿ ಶಾ ರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಧವನ್ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಇನ್ನಿಂಗ್ಸ್ ನ 4ನೇ ಓವರಿನಲ್ಲಿ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರೆ, ಆ ಬಳಿಕ ನಾಯಕ ಅಯ್ಯರ್ ಮತ್ತು ರಿಷಬ್ ಪಂತ್ ತಲಾ 14 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಸ್ಟೋಯಿನ್ಸ್ ಕೂಡ 9 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಮ್ಮ ಆಟವನ್ನು ಮುಂದುವರಿಸಿದ ಧವನ್ ಐಪಿಎಲ್ ವೃತ್ತಿ ಜೀವನದಲ್ಲಿ 2ನೇ ಶತಕ ಪೂರ್ಣಗೊಳಿಸಿದರು. ಉಳಿದಂತೆ ಹೆಟ್ಮಾಯರ್ ಒಂದು ಸಿಕ್ಸರ್ ಸಿಡಿಸಿ 10 ರನ್ ಗಳಿಸಿದರು.

ಶಾರ್ಜಾ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಶತಕ ಸಿಡಿಸಿದ್ದ ಧವನ್, ಪಂಜಾಬ್ ವಿರುದ್ಧ ಅಜೇಯ ಶತಕ ಗಳಿಸಿದ್ದು, 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್ಸ್ ಮನ್ ಓರ್ವರು ಸತತ ಎರಡು ಪಂದ್ಯಗಳಲ್ಲಿ ಶತಕ  ಗಳಿಸಿದ ಸಾಧನೆ ಇದಾಗಿದೆ. ಇಂದಿನ ಪಂದ್ಯದಲ್ಲಿ ಧವನ್ 106 ಗಳಿಸಿದರೆ, ಡೆಲ್ಲಿ ಪರ ಬ್ಯಾಟ್ ಮಾಡಿದ ಎಲ್ಲಾ ಆಟಗಾರರು ಒಟ್ಟಾರೆ 54 ರನ್ ಕಲೆ ಹಾಕಿದ್ದರು. ಪಂಜಾಬ್ ಪರ ಶಮಿ 2, ಮ್ಯಾಕ್ಸ್ ವೇಲ್, ಜೇಮ್ಸ್ ನಿಶಾಮ್, ಅಶ್ವಿನ್ ತಲಾ 1 ವಿಕೆಟ್ ಪಡೆದರು.







  • Blogger Comments
  • Facebook Comments

0 comments:

Post a Comment

Item Reviewed: ಪೂರನ್ ಅರ್ಧಶತಕದ ಮುಂದೆ ಮಂಕಾದ ಧವನ್ ದಾಖಲೆಯ ಶತಕ Rating: 5 Reviewed By: karavali Times
Scroll to Top