ಬಂಟ್ವಾಳ, ಅ. 19, 2020 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಗ್ರಾಮದ ಎನ್ ಸಿ ರೋಡು ಸಮೀಪದ ಗುಡ್ಡ ಪ್ರದೇಶದಲ್ಲಿ ಭಾನುವಾರ ಅಕ್ರಮವಾಗಿ ಜಾನುವಾರು ಕೂಡಿ ಹಾಕಿ ಮಾರಾಟ ಮಾಡಲು ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ವಾಹನಗಳು ಹಾಗೂ ಜಾನುವಾರುಗಳ ಸಹಿತ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಇಲ್ಲಿನ ಜನಪ್ರಿಯ ಬಜಾರ್ ಬಳಿ ನಿವಾಸಿ ಮಹಮ್ಮದ್ ಹನೀಫ್ ಎಂಬವರ ಮನೆ ಮುಂದೆ ಸುಮಾರು 6-7 ಮಂದಿ ಎಲ್ಲಿಂದಲೋ ಕದ್ದು ತಂದ ದನಕರುಗಳನ್ನು ವಧೆ ಮಾಡುವ ಸಲುವಾಗಿ ಅಕ್ರಮವಾಗಿ ಸಾಗಾಟ ಮಾಡಲು ಮಿನಿ ಟೆಂಪೊವೊಂದಕ್ಕೆ ತುಂಬಿಸುತ್ತಿದ್ದಾಗ ಪೂಂಜಾಲಕಟ್ಟೆ ಎಸ್ಸೈ ಸೌಮ್ಯಾ ಜೆ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ದಾಳಿ ವೇಳೆ 31 ಸಾವಿರ ರೂಪಾಯಿ ಮೌಲ್ಯದ 7 ಹಸುಗಳು, 9 ಕರುಗಳು ಹಾಗೂ ಕೆಎ 04 ಎಂಇ 3674 ನೋಂದಣಿ ಸಂಖ್ಯೆಯ ಸ್ಕಾರ್ಫಿಯೋ ಕಾರು, ಕೆಎ 19 ಎಂಜೆ 4926 ನೋಂದಣಿ ಸಂಖ್ಯೆಯ ಓಮ್ನಿ ಕಾರು, ಕೆಎ 19 ಎಸಿ 8411 ನೋಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಮಿನಿ ಟೆಂಪೊ, ಕೆಎ 21 ಯು 2670 ಹಾಗೂ ಕೆಎ 05 ಇಎಚ್ 1734 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಗಳು, 17 ಸಾವಿರ ರೂಪಾಯಿ ಮೌಲ್ಯದ 5 ಮೊಬೈಲ್ ಸೆಟ್‍ಗಳು ಸಹಿತ ಒಟ್ಟು 12.48 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಪೈಕಿ ಕಾವಳಮೂಡೂರು ಗ್ರಾಮದ ಇಚ್ಚಿಲ ನಿವಾಸಿ ಮೊಹಮ್ಮದ್ ರಾಹೀಲ್ (18) ಎಂಬಾತನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿ ಹಾಗೂ ಕಲಂ 4,5,8,9,11,13 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 1964 ಮತ್ತು ಕಲಂ 66 ಜೊತೆಗೆ 192(ಎ) ಐಎಂವಿ ಕಾಯ್ದೆ ಹಾಗೂ ಕಲಂ 41(1) (ಡಿ) ಜೊತೆಗೆ 102 ಸಿಆರ್‍ಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment