ಲಾಹೋರ್, ಡಿ 17, 2020 (ಕರಾವಳಿ ಟೈಮ್ಸ್) : ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಮೊಹಮದ್ ಅಮೀರ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ನಿವೃತ್ತಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ನಿರ್ವಹಣಾ ಮಂಡಳಿಯೊಂದಿಗೆ ಕೆಲಸ ನಿರ್ವಹಿಸುವುದು ಸಾಧ್ಯವಿಲ್ಲ. ಮಾನಸಿಕ ಹಿಂಸೆಯಾಗುತ್ತಿದೆ ಎಂಬ ಕಾರಣವನ್ನು ಅವರು ನೀಡಿದ್ದಾರೆ.
ಪಿಸಿಬಿ ನಿರ್ವಹಣಾ ಮಂಡಳಿಯೊಂದಿಗೆ ಕೆಲಸ ನಿರ್ವಹಿಸುವುದು ಸಾಧ್ಯವಿಲ್ಲ. ಅದೊಂದು ಮಾನಸಿಕ ಹಿಂಸೆ ಎಂದು ಹೇಳಿರುವ ಅಮೀರ್ ಈ ಕುರಿತಂತೆ ಮುಂದಿನ ದಿನಗಳಲ್ಲಿ ಸುಧೀರ್ಘ ಹೇಳಿಕೆ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ.
ಕೇವಲ 28ರ ವಯೋಮಾನದವರಾಗಿರುವ ಅಮೀರ್ ಅವರಲ್ಲಿ ಇನ್ನೂ ಹಲವು ವರ್ಷದ ಕ್ರಿಕೆಟ್ ಪ್ರತಿಭೆ ಅಡಗಿರುತ್ತಲೇ ಅವರು ನಿವೃತ್ತಿ ಘೋಷಿಸಿರುವುದು ಇದೀಗ ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆ ಹಾಗೂ ಅಚ್ಚರಿಗೆ ಕಾರಣವಾಗಿದೆ. ಕಳೆದ ವರ್ಷ ಅತಿಯಾದ ಕ್ರಿಕೆಟ್ ಎಂಬ ಕಾರಣ ನೀಡಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದ ಅಮೀರ್ ಇದೀಗ ಏಕದಿನ ಹಾಗೂ ಟಿ ಟ್ವೆಂಟಿ ಮಾದರಿ ಕ್ರಿಕೆಟ್‍ಗೂ ನಿವೃತ್ತಿಯನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‍ಗಳ ಸರಣಿಯಿಂದ ಅನುಭವಿ ವೇಗಿಯಾಗಿದ್ದ ಮೊಹಮ್ಮದ್ ಅಮಿರ್ ಅವರನ್ನು ಕೈಬಿಡಲಾಗಿತ್ತು. ಇದರ ನಂತರ ಇವರ ಈ ನಿವೃತ್ತಿ ಘೋಷಣೆಯಾಗಿದೆ. 2009ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಅಮೀರ್ ಇದುವರೆಗೆ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 147 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 259 ವಿಕೆಟ್ ಸಂಪಾದಿಸಿದ್ದಾರೆ.
2009ರಲ್ಲಿ ಪಾಕಿಸ್ತಾನ ಟಿ-20 ವಿಶ್ವಕಪ್ ಗೆದ್ದ ತಂಡದಲ್ಲಿ ಮೊಹಮದ್ ಅಮಿರ್ ಕೂಡ ಪ್ರಮುಖ ಅಂಗವಾಗಿದ್ದರು. 2010ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅಮಿರ್ ಭಾಗಿಯಾಗಿರುವುದು ಸಾಭೀತಾಗಿತ್ತು. ಇದು ಅಮಿರ್ ಜೀವನದ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ಇದಕ್ಕಾಗಿ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಅವರು ನಿಷೇಧಕ್ಕೂ ಒಳಗಾಗಿದ್ದರು. ನಿಷೇಧ ಅವಧಿ ಅಂತ್ಯವಾದ ಬಳಿಕ ಮತ್ತೆ ಪಾಕಿಸ್ತಾನ ತಂಡದಲ್ಲಿ ಅವರು ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದರು.
2017ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಮೊಹಮ್ಮದ್ ಅಮೀರ್ ಪ್ರಮುಖ ಕಾರಣರಾಗಿದ್ದರು. ಬಳಿಕ 2019 ರಲ್ಲಿ ಅತಿಯಾದ ಕ್ರಿಕೆಟ್ ಕಾರಣ ಮುಂದಿಟ್ಟು ಅವರು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಉಳಿದ ಮಾದರಿ ಕ್ರಿಕೆಟ್‍ಗೂ ಅವರು ವಿದಾಯ ಘೋಷಿಸಿದ್ದಾರೆ.
0 comments:
Post a Comment