ತಾಂತ್ರಿಕ ಸಲಹಾ ಸಮಿತಿಯಿಂದ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ : ಜನವರಿ 1 ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭ ಸಾಧ್ಯತೆ ? - Karavali Times ತಾಂತ್ರಿಕ ಸಲಹಾ ಸಮಿತಿಯಿಂದ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ : ಜನವರಿ 1 ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭ ಸಾಧ್ಯತೆ ? - Karavali Times

728x90

18 December 2020

ತಾಂತ್ರಿಕ ಸಲಹಾ ಸಮಿತಿಯಿಂದ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ : ಜನವರಿ 1 ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭ ಸಾಧ್ಯತೆ ?ಬೆಂಗಳೂರು, ಡಿ 18, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, 2ನೇ ಅಲೆಯ ಲಕ್ಷಣ ಕಂಡು ಬಾರದ ಹಿನ್ನೆಲೆಯಲ್ಲಿ ಜ. 1 ರಿಂದಲೇ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲೇ ತರಗತಿ ಬೋಧನೆ ಆರಂಭಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. 

ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಕುರಿತಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಲಿದ್ದು, ಆ ಬಳಿಕ ಸರಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. 

ತರಗತಿ ಆರಂಭ ಕುರಿತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಗುರುವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 10 ಮತ್ತು 12ನೇ ತರಗತಿಗಳನ್ನು ಆರಂಭಿಸಲು ಸರಕಾರ ಸಿದ್ಧತೆಗಳನ್ನು ನಡೆಸಬೇಕಿದೆ. ಆದರೆ, ನಿಯಂತ್ರಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುವಂತೆ ನೋಡಿಕೊಳ್ಳಬೇಕು. ವಾರದಲ್ಲಿ ಎರಡು ಬಾರಿ ವಿದ್ಯಾರ್ಥಿಗಳು ತರಗತಿಗಳಿಗೆ ಬರುವಂತೆ ನೋಡಿಕೊಳ್ಳಬೇಕು. 10 ಮತ್ತು 12ನೇ ತರಗತಿಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. 10 ಮತ್ತು 12ನೇ ತರಗತಿ ಆರಂಭವಾದ ಬಳಿಕ ಪರಿಸ್ಥಿತಿ ಅವಲೋಕಿಸಿ ಇತರೆ ತರಗತಿ ಆರಂಭ ಕುರಿತು ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. 

ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಸ್ತುತ ವರ್ಷದಲ್ಲಿ ಶಾಲಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಸಭೆಯಲ್ಲಿ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತಂತೆ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ರಾಜ್ಯದ ಪ್ರಸ್ತುತ ಕೋವಿಡ್ ಪ್ರಸರಣ, ಕೋವಿಡ್ ಪಾಸಿಟಿವ್ ಪ್ರಕರಣಗಳ ದಾಖಲು, ಮರಣ ಪ್ರಮಾಣ ಸೇರಿದಂತೆ ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲ ಸ್ತರಗಳಲ್ಲಿ ಚರ್ಚೆ ನಡೆಸಿ ಶಾಲೆಗಳ ಆರಂಭದ ವಿಚಾರದಲ್ಲಿ ಕೈಗೊಳ್ಳಬಹುದಾದ ಎಲ್ಲ ಸಂಗತಿಗಳನ್ನು ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಾಂತ್ರಿಕ ಸಲಹಾ ಸಮಿತಿಯಿಂದ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ : ಜನವರಿ 1 ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭ ಸಾಧ್ಯತೆ ? Rating: 5 Reviewed By: karavali Times
Scroll to Top