ಅನಿಯಂತ್ರಿತವಾಗಿ ಏರುತ್ತಿರುವ ಸಿಮೆಂಟ್, ಸ್ಟೀಲ್ ಸಹಿತ ಕಟ್ಟಡ ಸಾಮಗ್ರಿಗಳ ಬೆಲೆ : ಬಿಲ್ಡರ್ಸ್ ಅಸೋಸಿಯೇಷ್‍ನಿಂದ ಕಟ್ಟಡ ಸಾಮಗ್ರಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ - Karavali Times ಅನಿಯಂತ್ರಿತವಾಗಿ ಏರುತ್ತಿರುವ ಸಿಮೆಂಟ್, ಸ್ಟೀಲ್ ಸಹಿತ ಕಟ್ಟಡ ಸಾಮಗ್ರಿಗಳ ಬೆಲೆ : ಬಿಲ್ಡರ್ಸ್ ಅಸೋಸಿಯೇಷ್‍ನಿಂದ ಕಟ್ಟಡ ಸಾಮಗ್ರಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ - Karavali Times

728x90

12 February 2021

ಅನಿಯಂತ್ರಿತವಾಗಿ ಏರುತ್ತಿರುವ ಸಿಮೆಂಟ್, ಸ್ಟೀಲ್ ಸಹಿತ ಕಟ್ಟಡ ಸಾಮಗ್ರಿಗಳ ಬೆಲೆ : ಬಿಲ್ಡರ್ಸ್ ಅಸೋಸಿಯೇಷ್‍ನಿಂದ ಕಟ್ಟಡ ಸಾಮಗ್ರಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ

ಬೆಂಗಳೂರು, ಬಂಟ್ವಾಳ, ಫೆ. 12, 2021 (ಕರಾವಳಿ ಟೈಮ್ಸ್) : ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಸಿಮೆಂಟ್, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆಗಳನ್ನು ನಿಯಂತ್ರಣಕ್ಕೆ ಸರಕಾರ ಮುಂದಾಗದೇ ಇದ್ದಲ್ಲಿ ಕೃಷಿಯ ನಂತರ ಅತಿ ಹೆಚ್ಚು ಕೆಲಸಗಾರರನ್ನು (60 ಮಿಲಿಯನ್) ಹೊಂದಿರುವ ಕಟ್ಟಡ ನಿರ್ಮಾಣ ಕ್ಷೇತ್ರ ಅನಿವಾರ್ಯವಾಗಿ ನೈಫಥ್ಯಕ್ಕೆ ಸರಿಯಲಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖಾಧ್ಯಕ್ಷ ಜಿ.ಎಂ. ರವೀಂದ್ರ ತೀವ್ರ ವಿಷಾದಿಸಿದರು. ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ರಸ್ತೆಗೆ ಸುರಿಯುವ ಮೂಲಕ ವಿಭಿನ್ನವಾಗಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಟ್ಟಡ ನಿರ್ಮಾಣ ಕ್ಷೇತ್ರ ದೇಶದ ಜಿಡಿಪಿಗೆ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ. 60 ಮಿಲಿಯನ್ ಕಾರ್ಮಿಕರನ್ನು ಹೊಂದಿರುವ ಈ ಕ್ಷೇತ್ರ ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗಾವಕಾಶ ನೀಡಿರುವ ಕ್ಷೇತ್ರವಾಗಿದೆ. ಕಟ್ಟಡ ನಿರ್ಮಾಣಕ್ಕೆ ಪ್ರಮುಖ ಕಚ್ಚಾ ವಸ್ತುವಾಗಿ ಸಿಮೆಂಟನ್ನು ಬಳಸಲಾಗುತ್ತದೆ. ಸಿಮೆಂಟ್ ಹಾಗೂ ಸ್ಟೀಲ್ ಕಟ್ಟಡ ಕಾಮಗಾರಿಯ ಅತ್ಯಂತ ಅವಶ್ಯಕ ಕಚ್ಚಾ ವಸ್ತುಗಳು. ಈ ವಸ್ತುಗಳ ದರವನ್ನು ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸಿಮೆಂಟ್ ಉತ್ಪಾದಕರು ತಮ್ಮಲ್ಲೇ ತಂಡವನ್ನು ರಚಿಸಿಕೊಂಡು ಬೆಲೆಯನ್ನು ಹೆಚ್ಚಿಸುತ್ತಿರುವ ಬಗ್ಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕಾಂಪಿಟೇಷನ್ ಕಮಿಷನ್‍ಗೆ ದೂರು ನೀಡಿತ್ತು. ಇದರ ವಿಚಾರಣೆ ನಡೆಸಿದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಬಿಲ್ಡರ್ಸ್ ಅಸೋಸಿಯೇಷನ್‍ಗೆ 6307 ಕೋಟಿ ರೂಪಾಯಿಗಳ ನಷ್ಟವನ್ನು ಭರಿಸಿಕೊಡುವಂತೆ ಆದೇಶ ನೀಡಿದೆ. ಈ ಪ್ರಕರಣದ ಮೇಲ್ಮನವಿಯ ತನಿಖೆ ಇನ್ನೂ ಕೂಡಾ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇದೆ ಎಂದರು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಮೂಲಕ ಅನಿಯಂತ್ರಿತವಾಗಿ ಬೆಲೆ ಹೆಚ್ಚಿಸುವುದು, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಪಡೆಯಲು ಯತ್ನಿಸುವುದು ಹಾಗೂ ಕೃತಕ ಅಭಾವ ಸೃಷ್ಟಿಸುವುದನ್ನು ತಪ್ಪಿಸಬೇಕಾಗಿದೆ. ಈ ರೀತಿಯ ಬೆಲೆ ಏರಿಕೆ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ದೂಡಲಿದ್ದು, ಸರಕಾರಿ ಯೋಜನೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಳೆದ ಮೂರು ವರ್ಷಗಳ ಕಂಪನಿಗಳ ಉತ್ಪಾದನಾ ಸಾಮರ್ಥ್ಯ ಹಾಗೂ ಉತ್ಪಾದನೆಯಾದ ಪ್ರಮಾಣ ನೋಡಿದಲ್ಲಿ ಸಿಮೆಂಟ್ ಕಂಫನಿಗಳ ವ್ಯತಿರಿಕ್ತ ಹಿತಾಸಕ್ತಿಯನ್ನು ಕಾಣಬಹುದಾಗಿದೆ. ಬೇಕಂತಲೇ ತಮ್ಮ ಸಾಮರ್ಥ್ಯಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಕೃತಕ ಅಭಾವನ್ನು ಸೃಷ್ಟಿಸುತ್ತಿದ್ದಾರೆ ಎಂದವರು ಹೇಳಿದರು. ಬೆಂಗಳೂರಿನಲ್ಲಿ 2020 ಜನವರಿಯ ವೇಳೆಯಲ್ಲಿ ಸಿಮೆಂಟ್ ದರ 250 ರೂಪಾಯಿಗಳಿಷ್ಟಿತ್ತು. ನವೆಂಬರ್ 2020 ರ ಒಳಗಾಗಿ ಈ ಬೆಲೆಯಲ್ಲಿ ಭಾರಿ ಪ್ರಮಾಣದ ಬದಲಾವಣೆ ಕಂಡುಬಂದಿತು. ಫೆಬ್ರವರಿ 2021 ರ ವೇಳೆಗೆ ಪ್ರತಿ ಚೀಲ ಸಿಮೇಂಟ್ ಬೆಲ 360 ರೂಪಾಯಿಗಳಿಂದ 450 ರೂಪಾಯಿಗಳಷ್ಟು ಏರಿಕೆ ಕಂಡಿದ್ದನ್ನು ಕಾಣಬಹುದಾಗಿದೆ ಎಂದ ಅವರು 50 ಕೆಜಿ ಬ್ಯಾಗ್ ಸಿಮೆಂಟ್ ಉತ್ಪಾದನೆಗೆ ಸುಮಾರು 100 ರೂಪಾಯಿಗಳಷ್ಟು ಖರ್ಚಾಗುತ್ತದೆ. ಸಾಗಾಣಿಕೆ ಮತ್ತು ತೆರಿಗೆ ಸೇರಿ ಇದು 200 ರೂಪಾಯಿಗಳಷ್ಟಾಗಬೇಕು. ಆದರೆ, ಬೆಲೆಗಳನ್ನು ನೋಡಿದಲ್ಲಿ ಅನೈತಿಕವಾಗಿ ನಿಯಮಗಳನ್ನು ಗಾಳಿಗೆ ತೂರಿ ಬೆಲೆಗಳನ್ನು ಬೇಕಾಬಿಟ್ಟಿ ಹೆಚ್ಚಿಗೆ ಮಾಡಿರುವುದು ಕಂಡುಬರುತ್ತದೆ. ಇದರ ತನಿಖೆಗೆ ಕೇಂದ್ರ ಸರಕಾರ ಮುಂದಾಗಬೇಕು ಎಂದು ರವೀಂದ್ರ ಆಗ್ರಹಿಸಿದರು. ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಮಾತನಾಡಿ, ಇನ್ಸೂರೆನ್ಸ್ ಹಾಗೂ ಟೆಲಿಕಾಂ ರೆಗ್ಯೂಲೇಟರಿ ಪ್ರಾಧಿಕಾರಗಳ ರೀತಿಯಲ್ಲಿಯೇ ಸಿಮೆಂಟ್ ಹಾಗೂ ಸ್ಟೀಲ್ ರೇಟ್‍ಗಳನ್ನು ನಿಯಂತ್ರಿಸುವ ಪ್ರಾಧಿಕಾರ ರಚನೆ ಆಗಬೇಕು. ಜನವರಿ 2020 ರಲ್ಲಿ ಪ್ರತಿ ಟನ್ ಸ್ಟೀಲ್‍ಗೆ 36,000 ರೂಪಾಯಿಗಳಷ್ಟಿತ್ತು. ಫೆಬ್ರವರಿ 2021 ರಲ್ಲಿ ಇದು 50,000 ರೂಪಾಯಿಗಳಿಗೆ ಮುಟ್ಟಿದೆ. ಈ ರೀತಿ ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸ್ಟೀಲ್ ರೆಗ್ಯೂಲೇಟರಿ ಅಥಾರಿಟಿಯನ್ನು ರಚಿಸಬೇಕು. ಈ ಮೂಲಕ ಕಚ್ಚಾ ವಸ್ತುಗಳು ಹಾಗೂ ತೆರಿಗೆಯನ್ನು ಹೆಚ್ಚಿಗೆ ಮಾಡದೇ ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಬಿಐಎ ಆಲ್ ಇಂಡಿಯಾ ಮಾಜಿ ಅಧ್ಯಕ್ಷ ವಿಜಯ ರಾಘವ ರೆಡ್ಡಿ, ಬಿಐಎ ಮಾಜಿ ರಾಜ್ಯಾಧ್ಯಕ್ಷ ಸೋಮೇಶ್ ರೆಡ್ಡಿ, ಮಾಜಿ ಉಪಾಧ್ಯಕ್ಷ ಸುಬ್ರಮಣಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಅನಿಯಂತ್ರಿತವಾಗಿ ಏರುತ್ತಿರುವ ಸಿಮೆಂಟ್, ಸ್ಟೀಲ್ ಸಹಿತ ಕಟ್ಟಡ ಸಾಮಗ್ರಿಗಳ ಬೆಲೆ : ಬಿಲ್ಡರ್ಸ್ ಅಸೋಸಿಯೇಷ್‍ನಿಂದ ಕಟ್ಟಡ ಸಾಮಗ್ರಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ Rating: 5 Reviewed By: karavali Times
Scroll to Top