ಬೆಳಿಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮರಳಿ ಕಾಂಗ್ರೆಸಿಗೆ : ವೀರಕಂಭ ಗ್ರಾ ಪಂ ಸದಸ್ಯೆಯ ಹೈಜಾಕ್ ಪ್ರಕರಣಕ್ಕೆ ತಿರುವು - Karavali Times ಬೆಳಿಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮರಳಿ ಕಾಂಗ್ರೆಸಿಗೆ : ವೀರಕಂಭ ಗ್ರಾ ಪಂ ಸದಸ್ಯೆಯ ಹೈಜಾಕ್ ಪ್ರಕರಣಕ್ಕೆ ತಿರುವು - Karavali Times

728x90

7 February 2021

ಬೆಳಿಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮರಳಿ ಕಾಂಗ್ರೆಸಿಗೆ : ವೀರಕಂಭ ಗ್ರಾ ಪಂ ಸದಸ್ಯೆಯ ಹೈಜಾಕ್ ಪ್ರಕರಣಕ್ಕೆ ತಿರುವು

ಅಡಿಯಿಂದ ಮುಡಿವರೆಗೂ ಅಕ್ರಮದ ಕೂಸಾಗಿರುವ ಬಿಜೆಪಿಗರ ರಾಜಧರ್ಮ ಮಾತು ಮತ್ತೆ ನಗೆಪಾಟೀಲು : ರೈ ಬಂಟ್ವಾಳ, ಫೆ. 07, 2021 (ಕರಾವಳಿ ಟೈಮ್ಸ್) : ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್‍ನ ಕಾಂಗ್ರೆಸ್ ಬೆಂಬಲಿತ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಸದಸ್ಯೆ ಲಲಿತಾ ಅವರನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಕಛೇರಿಯಲ್ಲಿ ಭಾನುವಾರ ಬೆಳಿಗ್ಗೆ ಬಿಜೆಪಿ ಪಕ್ಷಕಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಆದರೆ ಸಂಜೆ ವೇಳೆಗೆ ಸದಸ್ಯೆ ಮತ್ತೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸ್ವಾರಸ್ಯಕರ ಘಟನೆ ವರದಿಯಾಗಿದೆ. ವೀರಕಂಭ ಗ್ರಾಮ ಪಂಚಾಯತ್‍ನಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ತಲಾ 7 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಸಮಬಲ ಸಾಧಿಸಿತ್ತು. ಇದರಿಂದಾಗಿ ಪಂಚಾಯತ್ ಆಡಳಿತ ಯಾವ ಪಕ್ಷದ ಪಾಲಿಗೆ ದೊರೆಯುತ್ತದೆ ಎಂಬ ಜಿಜ್ಞಾಸೆ ಮೂಡಿತ್ತು. ಈ ಮಧ್ಯೆ ಆಪರೇಶನ್ ಕಮಲಕ್ಕೆ ಮೊರೆ ಹೋದ ಕೇಸರಿ ನಾಯಕರು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಸದಸ್ಯೆಯನ್ನು ಹೈಜಾಕ್ ಮಾಡಿ ಭಾನುವಾರ ಬೆಳಿಗ್ಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದರು. ಇದರಿಂದ ಪಂಚಾಯತ್‍ನಲ್ಲಿ ಬಿಜೆಪಿ ಒಂದು ಸ್ಥಾನ ಹೆಚ್ಚು ಪಡೆದುಕೊಂಡು ಅಧಿಕಾರದ ಕನಸು ಕಂಡಿತ್ತು. ಆದರೆ ಇದು ಮಹಿಳಾ ಸದಸ್ಯೆ ಸ್ವ ಇಚ್ಛೆಯಿಂದ ಪಕ್ಷಾಂತರ ನಡೆಸಿದ್ದಾಗಿರಲಿಲ್ಲ. ಬಲವಂತದ ಪಕ್ಷಾಂತರ ಇದಾಗಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿ ಮಹಿಳಾ ಸದಸ್ಯೆ ಸಂಜೆ ವೇಳೆಗೆ ಮತ್ತೆ ಮಾಜಿ ಸಚಿವರ ಮೂಲಕ ಮಾತೃ ಪಕ್ಷಕ್ಕೆ ಮರಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಮಾತು ಮಾತಿಗೂ ರಾಜಧರ್ಮದ ಬಗ್ಗೆ ಭಾಷಣ ಬಿಗಿಯುವ ಶಾಸಕ ಸಹಿತ ಬಿಜೆಪಿ ನಾಯಕರು ಇದೀಗ ಪಂಚಾಯತ್ ಅಧಿಕಾರಕ್ಕಾಗಿ ವಾಮಮಾರ್ಗದ ಮೂಲಕ ಕಾಂಗ್ರೆಸ್ ಬೆಂಬಲಿತರನ್ನು ಬಲವಂತದಿಂದ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಪ್ರತಿಕ್ರಯಿಸಿದ್ದಾರೆ. ವೀರಕಂಭ ಪಂಚಾಯತ್ ಮಾತ್ರವಲ್ಲದೆ ಇನಿತರ ಕಡೆಗಳಲ್ಲೂ ಕಾಂಗ್ರೆಸ್ ಬೆಂಬಲಿತರಿಗೆ ಗಾಳ ಹಾಕುವ ಮೂಲಕ ಬಿಜೆಪಿ ನಾಯಕರು ರಾಜಧರ್ಮದ ಮಾತನ್ನು ಗಾಳಿಗೆ ತೂರುವ ಮೂಲಕ ವಾಮಮಾರ್ಗದ ಮೂಲಕ ಅಧಿಕಾರಕ್ಕಾಗಿ ಹಪಿಹಪಿಸುತ್ತಿದ್ದಾರೆ ಎಂದಿರುವ ರಮಾನಾಥ ರೈ ಬಿಜೆಪಿ ಅಡಿಯಿಂದ ಮುಡಿವರೆಗೂ ಅಕ್ರಮ, ಅನ್ಯಾಯ, ಅನೈತಿಕ, ಅಪವಿತ್ರ ರಾಜಕೀಯ ನಡೆಸುವ ಮೂಲಕ ನೇರವಾಗಿ ಜನಬೆಂಬಲ ಪಡೆದುಕೊಂಡು ಅಧಿಕಾರ ನಡೆಸುವ ಎಲ್ಲ ನೈತಿಕತೆಯನ್ನೂ ಕಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜದ್ರೋಹ ಅಕ್ರಮಗಳು ಮುಂದುವರಿಯಲು ಜನ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬೆಳಿಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮರಳಿ ಕಾಂಗ್ರೆಸಿಗೆ : ವೀರಕಂಭ ಗ್ರಾ ಪಂ ಸದಸ್ಯೆಯ ಹೈಜಾಕ್ ಪ್ರಕರಣಕ್ಕೆ ತಿರುವು Rating: 5 Reviewed By: karavali Times
Scroll to Top