ಬಂಟ್ವಾಳ, ಮಾ. 08, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಪರಿಷೃತ ತೆರಿಗೆ ನಿಯಮ ಈಗಾಗಲೇ ಸರಕಾರಿ ಮಟ್ಟದಲ್ಲಿ ಗಜೆಟ್ ನೊಟಿಫಿಕೇಶನ್ ಮೂಲಕ ತಿದ್ದುಪಡಿ ಆಗಿ ಹಿಂದಿನ ಆಸ್ತಿ ತೆರಿಗೆ ನಿಯಮ ರದ್ದಾಗಿರುವುದರಿಂದ ಬಂಟ್ವಾಳ ಪುರಸಭೆಯಲ್ಲೂ ಜನ ಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಪರಿಷ್ಕøತ ತೆರಿಗೆ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಘೋಷಿಸಿದರು.
ಶನಿವಾರ ಪುರಸಭಾ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಸರಕಾರ ಈಗಾಗಲೇ ಸರಕಾರೀ ಮಟ್ಟದಲ್ಲಿ ಪುರಸಭಾ ಕಾಯ್ದೆ ತಿದ್ದುಪಡಿ ಮಾಡಿ ಗಜೆಟ್ ನೋಟಿಫಿಕೇಶನ್ ಪ್ರಚಾರ ಪಡಿಸಿ ಈ ಹಿಂದಿನ ತೆರಿಗೆ ಪದ್ದತಿಯನ್ನು ರದ್ದುಪಡಿಸಿರುವುದರಿಂದ ಆಯಾ ಪ್ರದೇಶದ ಆಸ್ತಿತೆರಿಗೆಯ ಶೇಕಡಾವಾರು ನಿಗದಿಪಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮಕೈಗೊಳ್ಳಬೇಕಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ. ಅ ಪ್ರಕಾರ ಬಂಟ್ವಾಳ ಪುರಸಭೆಯ ಸದಸ್ಯರೊಂದಿಗೆ ಚರ್ಚಿಸಲು ವಿಶೇಷ ಸಭೆ ಕರೆಯಲಾಗಿದೆ ಎಂದರು.
ಕಳೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಪರಿಷ್ಕರಣೆ ಬಗ್ಗೆ ಸದಸ್ಯರ ಮಧ್ಯೆ ಒಮ್ಮತ ಮೂಡಿ ಬರದೆ ಇದ್ದುದರಿಂದ ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಶನಿವಾರ ವಿಶೇಷ ಸಭೆ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ ಪರಿಷ್ಕøತ ತೆರಿಗೆ ವಿಧಿಸುವ ಪುರಸಭಾ ನಿರ್ಣಯಕ್ಕೆ ಮಿತ್ರ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ತಮ್ಮ ವಿರೋಧವನ್ನು ದಾಖಲಿಸಿದರು. ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಸರಕಾರಿ ಸುತ್ತೋಲೆ ಜಾರಿ ನಡೆಗೆ ಬೆಂಬಲ ವ್ಯಕ್ತಪಡಿಸಿದರು.
ಪುರಸಭಾ ವಿಶೇಷ ಸಭೆಯಲ್ಲಿ ಆಗಿರುವ ನಿರ್ಣಯದಂತೆ ಪರಿಷ್ಕøತ ತೆರಿಗೆಯನ್ನು ವಾಸ್ತವ್ಯ ಉದ್ದೇಶಕ್ಕೆ 0.6%, ವಾಣಿಜ್ಯ ಉದ್ದೇಶಕ್ಕೆ 1.00%, ಖಾಲಿ ನಿವೇಶನ 0.2% ಆಸ್ತಿ ತೆರಿಗೆ ವಿಧಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾರಿಗೂ ಹೊರೆಯಾಗದ ರೀತಿಯಲ್ಲಿ ಕಡಿಮೆ ಶೇಕಡಾ ದರವನ್ನು ಬಂಟ್ವಾಳ ಪುರಸಭೆಯಲ್ಲಿ ನಿಗದಿಪಡಿಸಲಾಗಿದೆ ಎಂದು ಅಧ್ಯಕ್ಷ ಶರೀಫ್ ಶಾಂತಿಅಂಗಡಿ ಈ ಬಗ್ಗೆ ಸಮರ್ಥಿಸಿಕೊಂಡರು. ಸದ್ಯಕ್ಕೆ ಆಸ್ತಿ ತೆರಿಗೆಯನ್ನು ಮಾತ್ರ ಪರಿಷ್ಕರಿಸಲಾಗಿದ್ದು, ನೀರಿನ ದರ ಪರಿಷ್ಕರಣೆಯನ್ನು ತಡೆ ಹಿಡಿಯಲಾಗಿದೆ. ನೀರಿನ ದರ ಯಥಾ ಸ್ಥಿತಿ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
0 comments:
Post a Comment