ಬೆಂಗಳೂರು, ಮಾ. 05, 2021 (ಕರಾವಳಿ ಟೈಮ್ಸ್) : ರಾಜ್ಯ ನೀರಾವರಿ ಇಲಾಖಾ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣ ಬಯಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಎಚ್ಡೀಕೆ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳಿಸಲು ಬಾಂಬೆಯಲ್ಲಿ ಬೀಡು ಬಿಟ್ಟು ಕಾರ್ಯಪ್ರವೃತ್ತರಾಗಿದ್ದ ಆರು ಮಂದಿ ವಲಸಿಗ ಸಚಿವರು ಇದೀಗ ನ್ಯಾಯಾಲಯದ ಮೊರೆ ಹೋಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ವಿರುದ್ಧ ಮಾನಹಾನಿಕಾರಿ ಸುದ್ದಿಯನ್ನು ನಿರ್ಬಂಧಿಸುವಂತೆ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ. ಸಿ. ಪಾಟೀಲ್, ಕ್ರೀಡಾ ಸಚಿವ ನಾರಾಯಣಗೌಡ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರೇ ನ್ಯಾಯಾಲಯದ ಮೆಟ್ಟಿಲೇರಿರುವ ಸಚಿವ ಮಹಾಶಯರು.
ಈ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಶನಿವಾರ ಆದೇಶ ನೀಡುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ಸಚಿವ ಜಾರಕಿಹೊಳಿ ರಾಸಲೀಲೆ ಸೀಡಿ ವ್ಯಾಪಕ ಬಿರುಗಾಳಿ ಎಬ್ಬಿಸಿರುವ ನಡುವೆ ಇದೀಗ ಆರು ಮಂದಿ ಸಚಿವರು ಮಾಧ್ಯಮ ನಿರ್ಬಂಧ ಹೇರಿ ಕೋರ್ಟ್ ಮೊರೆ ಹೋಗಿರುವುದು ರಾಜ್ಯದ ಜನತೆಯ ಕುತೂಹಲ ಹಾಗೂ ಸಂಶಯಕ್ಕೆ ಕಾರಣವಾಗಿದೆ. ಸಚಿವರು ಮಾಧ್ಯಮಗಳ ವಿರುದ್ದ ನ್ಯಾಯಾಲಯಕ್ಕೆ ಮೊರೆ ಹೋಗಲು ಇರುವ ಭಯವಾದರೂ ಏನು? ಯಾವ ಕಾರಣಕ್ಕಾಗಿ ಈ ರೀತಿ ಅರ್ಜಿ ಸಲ್ಲಿಸಿದ್ದಾರೆ ಎಂಬುದು ರಾಜ್ಯದ ಜನತೆಯ ಪಾಲಿಗೆ ಉತ್ತರ ಇಲ್ಲದ ಪ್ರಶ್ನೆಯಾಗಿದೆ.
0 comments:
Post a Comment