ಕೊನೆ ಹಂತದಲ್ಲಿ ಪರದಾಡಿದ ಕೆಕೆಆರ್ ದಾಂಡಿಗರು : ಮುಂಬೈಗೆ 10 ರನ್‍ಗಳ ರೋಚಕ ಜಯ - Karavali Times ಕೊನೆ ಹಂತದಲ್ಲಿ ಪರದಾಡಿದ ಕೆಕೆಆರ್ ದಾಂಡಿಗರು : ಮುಂಬೈಗೆ 10 ರನ್‍ಗಳ ರೋಚಕ ಜಯ - Karavali Times

728x90

14 April 2021

ಕೊನೆ ಹಂತದಲ್ಲಿ ಪರದಾಡಿದ ಕೆಕೆಆರ್ ದಾಂಡಿಗರು : ಮುಂಬೈಗೆ 10 ರನ್‍ಗಳ ರೋಚಕ ಜಯ


ಮುಂಬೈ, ಎಪ್ರಿಲ್ 14, 2021 (ಕರಾವಳಿ ಟೈಮ್ಸ್) : ಕನಿಷ್ಠ ಮೊತ್ತದ ಕಾದಾಟದಲ್ಲಿ ಕೊನೆಗೂ ಮೇಲುಗೈ ಸಾಧಿಸಿದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 14ನೇ ಆವೃತ್ತಿಯ ಮಂಗಳವಾರ ರಾತ್ರಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಮಾಂಚಕ 10 ರನ್‍ಗಳಿಂದ ಗೆದ್ದುಕೊಂಡಿದೆ.

ಮುಂಬೈ ನಿಗದಿಪಡಿಸಿದ್ದ 153 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ಸುಲಭವಾಗಿ ಗೆಲ್ಲುವ ಧಾವಂತದಲ್ಲಿತ್ತು. ಆದರೆ ರಾಹುಲ್ ಚಹರ್ ಸ್ಪಿನ್ ಮೋಡಿಗೆ ತತ್ತರಿಸಿದ ಕೆಕೆಆರ್ ದಾಂಡಿಗರು ಪರದಾಟ ನಡೆಸಿದ ಪರಿಣಾಮ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೆ ಶಕ್ತವಾಗಿ 10 ರನ್‍ಗಳಿಂದ ಸೋಲೊಪ್ಪಿಕೊಂಡಿತು. 

ಕೊನೆಯ 18 ಎಸೆತದಲ್ಲಿ ಕೆಕೆಆರ್ ಗೆಲ್ಲಲು 22 ರನ್‍ಗಳ ಅವಶ್ಯಕತೆ ಇತ್ತು. ದಿನೇಶ್ ಕಾರ್ತಿಕ್ ಹಾಗೂ  ಆಂಡ್ರೆ ರಸೆಲ್ ಕ್ರೀಸ್‍ನಲ್ಲಿದ್ದರು. ಸಹಜವಾಗಿಯೇ ಕೆಕೆಆರ್ ಗೆಲುವು ಸಾಧಿಸಲಿದೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಕೃನಾಲ್ ಎಸೆದ 18ನೇ ಓವರಿನಲ್ಲಿ ಕೇಲವ 3 ರನ್ ಬಂದರೆ, 19ನೇ ಓವರ್ ಎಸೆದ ಬುಮ್ರಾ ಕೇವಲ 4 ರನ್ ನೀಡಿ ನಿಯಂತ್ರಿತ ದಾಳಿಗಾರಿಕೆ ನಡೆಸಿದರು. ಕೊನೆಯ ಓವರ್‍ನಲ್ಲಿ 15 ರನ್ ಬೇಕಿತ್ತು. ಟ್ರೆಂಟ್ ಬೌಲ್ಟ್ ಎಸೆದ ಮೊದಲ 2 ಎಸೆತದಲ್ಲಿ ಎರಡು ಸಿಂಗಲ್ ರನ್ ಬಂದರೆ ಮೂರನೇ ಎಸೆತದಲ್ಲಿ ರಸೆಲ್ ಬೌಲ್ಟ್‍ಗೆ ಕ್ಯಾಚ್ ನೀಡಿ ನಿರ್ಗಸಿದರು. ನಂತರ ಬಂದ ಪ್ಯಾಟ್ ಕಮ್ಮಿನ್ಸ್ ಬೌಲ್ಡ್ ಆದರೆ 5ನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಎಸೆತ ಡಾಟ್ ಬಾಲ್ ಆಗಿ ಪರಿಣಮಿಸಿತು. 

ರಾಹುಲ್ ಚಹರ್ 4 ಓವರ್‍ಗಳಲ್ಲಿ 27 ರನ್ ನೀಡಿ ಪ್ರಮುಖ 4 ವಿಕೆಟ್ ಕಿತ್ತರು. ಇದುವೇ ಪಂದ್ಯದ ಗತಿ ಬದಲಾಗಲು ಕಾರಣವಾಯಿತು. ನಿತೀಶ್ ರಾಣಾ 57 ರನ್ (47 ಎಸೆತ, 6 ಬೌಂಡರಿ, 2 ಸಿಕ್ಸರ್) ಶುಭಮನ್ ಗಿಲ್ 33 ರನ್ (24 ಎಸೆತ, 5 ಬೌಂಡರಿ, 1 ಸಿಕ್ಸರ್) ಭಾರಿಸಿ ಪ್ರತಿರೋಧ ತೋರಿದ್ದರಾದರೂ ಕೊನೆವರೆಗೆ ಕ್ರೀಸಿನಲ್ಲಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಡಲು ವಿಫಲರಾದರು. 

ಮುಂಬೈ ಪರ ಸೂರ್ಯಕುಮಾರ್ ಯಾದವ್ 56 ರನ್ (36 ಎಸೆತ, 7 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮಾ 43 ರನ್ (32 ಎಸೆತ 3 ಬೌಂಡರಿ, 1 ಸಿಕ್ಸರ್) ಭಾರಿಸಿದರೆ. ಕೆಕೆಆರ್ ಪರ ಆಂಡ್ರೆ 2 ಓವರ್ ಎಸೆದು 15 ರನ್ ನೀಡಿ ಪ್ರಮುಖ 5 ವಿಕೆಟ್ ಉಡಾಯಿಸಿ ಮುಂಬೈ ವಿರುದ್ದ ದಾಖಲೆ ಬರೆದರೆ, ಪ್ಯಾಟ್ ಕಮ್ಮಿನ್ಸ್ 2 ವಿಕೆಟ್, ವರುಣ್ ಚಕ್ರವರ್ತಿ, ಶಕಿಬ್ ಉಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

ಈ ಮೊದಲು ಮುಂಬೈ ವಿರುದ್ದ ಆರ್.ಸಿ.ಬಿ. ಬೌಲರ್ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಉತ್ತಮ ಪಡಿಸಿಕೊಂಡ ರಸೆಲ್ ತನ್ನ ಪಾಲಿಗೆ ವರ್ಗಾಯಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊನೆ ಹಂತದಲ್ಲಿ ಪರದಾಡಿದ ಕೆಕೆಆರ್ ದಾಂಡಿಗರು : ಮುಂಬೈಗೆ 10 ರನ್‍ಗಳ ರೋಚಕ ಜಯ Rating: 5 Reviewed By: karavali Times
Scroll to Top