ಉಪ್ಪಿನಂಗಡಿ, ಎಪ್ರಿಲ್ 09, 2021 (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪುಲಿಂಬಾಡಿ ಎಂಬಲ್ಲಿ ಗುರುವಾರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದ ಬಗ್ಗೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಪುಳಿಂಬಾಡಿ ನಿವಾಸಿ ಧರ್ಣಪ್ಪ ಗೌಡ ಅವರ ಪುತ್ರ ಕೇಶವ ಗೌಡ ಹಾಗೂ ನೆರೆ ಮನೆಯ ಅಬೂಬಕ್ಕರ್, ಸಲೀಂ ಹಾಗೂ ಫಾರೂಕ್ ಎಂಬವರ ಮಧ್ಯೆ ಕುಮ್ಕಿ ಜಾಗದ ವಿಚಾರದಲ್ಲಿ ತಕರಾರಿದ್ದು, ಕೇಶವ ಗೌಡ ಅವರು ಠಾಣೆಗೆ ನೀಡಿದ ದೂರಿನಂತೆ ಗುರುವಾರ ಆರೋಪಿಗಳಾದ ಅಬೂಬಕ್ಕರ್, ಸಲೀಂ, ಫಾರೂಕ್, ಇರ್ಫಾನ್, ಸಾದುದ್ದೀನ್, ಸಿರಾಜ್, ನಾಸಿರ್ ಹಾಗೂ ಮಸೂದ್ ಎಂಬವರು ಕುಮ್ಕಿ ಜಾಗದಲ್ಲಿ ಸೊಪ್ಪು ಕಡಿಯಲು ಬಂದಿದ್ದು, ಈ ವೇಳೆ ಕೇಶವ ಗೌಡ ಹಾಗೂ ಅವರ ತಂಗಿಯ ಮಗ ಸಂದೀಪ್ ಅವರು ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಆರೋಪಿಗಳು ಕೇಶವ ಗೌಡಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅದೇ ದಾರಿಯಾಗಿ ಪಿಕಪ್ ವಾಹನದಲ್ಲಿ ಬರುತ್ತಿದ್ದ ಪ್ರಕಾಶ್ ಹಾಗೂ ಸುಧೀರ್ ಎಂಬವರು ವಾಹನ ನಿಲ್ಲಿಸಿ ಗಲಾಟೆ ಬಿಡಿಸಲು ಬಂದಿದ್ದು ಈ ವೇಳೆ ಕಾರಿನಲ್ಲಿ ಬಂದ ಆರೋಪಿಗಳು ಅವರಿಗೂ ಹಲ್ಲೆ ನಡೆಸಿ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2021 ರಂತೆ ಕಲಂ 143, 147, 148, 504, 323, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ಯ ಗ್ರಾಮದ ಪುಲಿಪ್ಪಾಡಿ ನಿವಾಸಿ ದಿವಂಗತ ಅಹಮ್ಮದ್ ಬ್ಯಾರಿ ಅವರ ಪುತ್ರ ಅಬೂಬಕ್ಕರ ಅವರು ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದು, ಅಬೂಬಕ್ಕರ್ ತನ್ನ ಗುಡ್ಡ ಜಾಗದಲ್ಲಿ ಮಳೆಗಾಲಕ್ಕೆ ಬೇಕಾದ ಸೊಪ್ಪು, ಕಟ್ಟಿಗೆಗಳನ್ನು ಒಟ್ಟುಗೂಡಿಸುತ್ತಿದ್ದ ವೇಳೆ ಆರೋಪಿಗಳಾದ ಕೇಶವ, ಸಂದೀಪ್, ಸುಧೀರ್ ಹಾಗೂ ಪ್ರಕಾಶ್ ಅವರು ಸೊಪ್ಪು ಕಡಿಯುವುದನ್ನು ಪ್ರಶ್ನಿಸಿ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಅಬೂಬಕ್ಕರ್ ಅವರ ತಮ್ಮ ಸಲೀಂಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ. ಅದೇ ವೇಳೆ ಆರೋಪಿ ಕೇಶವನ ಸ್ನೇಹಿತನಾದ ಪ್ರಕಾಶ್ ಎಂಬಾತ ಪಿಕಪ್ ವಾಹನದಲ್ಲಿ ಬಂದಿದ್ದು, ಆತ ತನ್ನ ಗೆಳೆಯರೊಂದಿಗೆ ಸೇರಿ ಅಲ್ಲಿದ್ದ ಮರದ ದೊಣ್ಣೆಯಿಂದ ಸಲೀಂ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ದೂರಲಾಗಿದೆ.
ಈ ಬಗ್ಗೆಯೂ ಉಪ್ಪಿನಂಗಡಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2021 ರಂತೆ ಕಲಂ 143, 147, 148, 504, 323, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ಗುಂಪಿನ ಗಾಯಾಳುಗಳು ಪುತ್ತೂರಿನ ಭಿನ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತಂಡಗಳ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment