ಮಡಿಕೇರಿ, ಜೂನ್ 01, 2021 (ಕರಾವಳಿ ಟೈಮ್ಸ್) : ಕೋವಿಡ್-19 ಸಾಂಕ್ರಾಮಿಕ ರೋಗವು ಹಲವರಿಗೆ ವಿವಿಧ ಜೀವನ ಪಾಠಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕೂ ಮಿಗಿಲಾಗಿ ಮನುಷ್ಯನಿಗೆ ಮಾನವೀಯತೆಯ ಬೆಲೆಯಂತೂ ಸ್ಪಷ್ಟವಾಗಿ ಕಲಿತುಕೊಳ್ಳಲು ಅವಕಾಶ ಕೊಟ್ಟಿದೆ. ಕೋಟ್ಯಾಧಿಪತಿಯಾದರೂ ಕ್ಷಣಮಾತ್ರದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟ ಅದೆಷ್ಟೋ ಘಟನೆಗಳು ನಡೆದ ಬಳಿಕ ಹಲವು ಮಂದಿ ಧನಿಕರು ಲೋಕ ಏನಿದ್ದರೂ ನಶ್ವರ, ಕೂಡಿಟ್ಟ ಸಂಪತ್ತು ಅಶಕ್ತರು, ಬಡವರಿಗೆ ಹಂಚಿ ತಿಂದರೆ ಸ್ವರ್ಗ ಸುಖ ಎಂಬುದನ್ನು ಮನಗಂಡು ತಮ್ಮ ಸಂಪತ್ತನ್ನು ಅರ್ಹರಿಗೆ ತಲುಪಿಸಲೂ ಆರಂಭಿಸಿದರು. ಈ ಮಧ್ಯೆ ಬಡವರು, ಮಧ್ಯಮ ವರ್ಗದ ಜನ ಕೂಡಾ ತಮ್ಮ ಕೈಲಾದ ಸಹಾಯ-ಸಹಕಾರ ಸಮಾಜಕ್ಕೆ ನೀಡಲು ಮುಂದೆ ಬಂದಿದ್ದಾರೆ.
ಅಂತಹ ಘಟನೆಯೊಂದು ಕೊಡಗು ಜಿಲ್ಲೆಯಿಂದ ವರದಿಯಾಗಿದೆ. ಇಲ್ಲಿನ ಆಟೋ ರಿಕ್ಷಾ ಚಾಲಕ ಬಿ.ವಿ ಪ್ರಶಾಂತ್ ಕುಮಾರ್ ಅವರು ತಮ್ಮ ತಾಯಿಗೆ ಕೋವಿಡ್-19 ಸೋಂಕು ಬಾಧಿಸಿದ ಬಳಿಕ ಸೋಂಕಿತರಿಗೆ ಉಚಿತವಾಗಿ ಆಟೋ ಸೇವೆ ಒದಗಿಸುವ ಮೂಲಕ ವಾರಿಯರ್ ಸೇವೆ ಮಾಡುತ್ತಾ ಸುದ್ದಿಯಾಗಿದ್ದಾರೆ.
ಇದುವರೆಗೆ ಸುಮಾರು 55 ಕೋವಿಡ್ ಸೋಂಕಿತರಿಗೆ ಉಚಿತ ಸೇವೆ ನೀಡಿದ್ದಾರೆ ಎನ್ನಲಾಗಿದೆ. ಲಾಕ್ ಡೌನ್ ಅಂತ್ಯದ ವರೆಗೂ ಕೋವಿಡ್-19 ರೋಗಿಗಳಿಗೆ ಉಚಿತ ಸೇವೆ ನೀಡುವುದಾಗಿ ಪ್ರಶಾಂತ್ ಹೇಳಿಕೊಂಡಿದ್ದಾರೆ.
ಶುಂಠಿಕೊಪ್ಪ ನಿವಾಸಿ ಪ್ರಶಾಂತ್ ಅವರ 65 ವರ್ಷದ ತಾಯಿಗೆ ತಿಂಗಳ ಹಿಂದೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಅಲ್ಲದೆ ಅವರ ಸ್ಥಿತಿಯೂ ಚಿಂತಾಜಕವಾಗಿತ್ತು. ಆದರೆ ವೆಂಟಿಲೇಟರ್ ಫೆಸಿಲಿಟಿಯ ಮೂಲಕ ಮಡಿಕೇರಿಯಲ್ಲಿರುವ ಕೋವಿಡ್-19 ಆಸ್ಪತ್ರೆಯಲ್ಲಿ ನಡೆದ ಯಶಸ್ವಿ ಚಿಕಿತ್ಸೆಯ ನಂತರ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಈ ಅವಧಿಯಲ್ಲಿ ಹಲವು ಕೋವಿಡ್-19 ರೋಗಿಗಳ ಪರದಾಟವನ್ನು ಪ್ರಶಾಂತ್ ಗಮನಿಸಿದ್ದರು.
ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಕೋವಿಡ್-19 ರೋಗಿಗಳು ಸಾರಿಗೆ ವ್ಯವಸ್ಥೆ ಸರಿ ಇಲ್ಲದೇ ಪರದಾಡುತ್ತಿರುವುದನ್ನು ಗಮನಿಸಿದ್ದೆ. ನಂತರ ನನ್ನ ಮನೆಯ ಬಳಿಯೇ ಇದ್ದ ಶಾಲೆಯ ಟೀಚರ್ ಹಾಗೂ ಆಕೆಯ ಕುಟುಂಬ ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿತ್ತು. ಆದರೆ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ನಾನು ಅವರನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಪ್ರಶಾಂತ್ ಹೇಳುತ್ತಾರೆ. ಬಳಿಕ ಅಗತ್ಯವಿರುವವರಿಗೆ ಸೇವೆ ಲಭ್ಯವಾಗುವಂತೆ ಮಾಡಲು ತಮ್ಮ ಮೊಬೈಲ್ ಸಂಖ್ಯೆಯನ್ನು ವಾಟ್ಸ್ ಆಪ್ ಗ್ರೂಪ್ ಗಳಿಗೆ ಹಂಚಿ ಎಪ್ರಿಲ್ 30 ರಿಂದ ಉಚಿತ ಸೇವೆಗಳನ್ನು ಪ್ರಾರಂಭಿಸಿದ್ದರು.
ಶುಂಠಿಕೊಪ್ಪದ ಪಂಚಾಯಿತಿ ಸದಸ್ಯ ಸುನಿಲ್ ಹಾಗೂ ಪಿಡಿಒ ವೇಣುಗೋಪಾಲ್ ಅವರ ಸಹಾಯದಿಂದ ಕರ್ಫ್ಯೂ ಅವಧಿಯಲ್ಲಿ ಸಂಚರಿಸಲು ಪ್ರಶಾಂತ್ ಐಡಿ ಕಾರ್ಡ್ ಮತ್ತು ಪಾಸ್ ನ್ನು ಪಡೆದಿದ್ದಾರೆ. ಒಂದು ದಿನ ನಾನು ರಾತ್ರಿ 11 ರ ವೇಳೆಗೆ ಹನೀಫ್ ಎಂಬ ವ್ಯಕ್ತಿ ಮಡಿಕೇರಿ ಮಾರ್ಕೆಟ್ ಪ್ರದೇಶದ ಬಳಿ ನಿತ್ರಾಣರಾಗಿ ಇರುವುದನ್ನು ಕಂಡೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ಆತನಿಗೆ ಕೋವಿಡ್-19 ಇರುವುದು ದೃಢಪಟ್ಟಿತು. ಆದರೆ ಆತ ಕೋವಿಡ್-19 ನಿಂದ ಮೃತಪಟ್ಟ. ಮತ್ತೋರ್ವ ರೋಗಿ ಸುಬ್ಬು ಎಂಬಾತನನ್ನು ಆಸ್ಪತ್ರೆಗೆ ಕೊರೆದೊಯ್ದಿದ್ದೆ. ಆತನೂ ಸೋಂಕಿನಿಂದ ಮೃತಪಟ್ಟ ಎಂದು ಪ್ರಶಾಂತ್ ಮನಸ್ಸಿನ ನೋವು ಹೇಳಿಕೊಳ್ಳುತ್ತಾರೆ.
ಶುಂಠಿಕೊಪ್ಪದ ಆಸ್ಪತ್ರೆಯ ವೈದ್ಯ ಜೀವನ್ ಅವರು ಪ್ರಶಾಂತ್ ಗೆ ಪಿಪಿಇ ಕಿಟ್ ಗಳನ್ನು ನೀಡುತ್ತಾರೆ, ಪಂಚಾಯತ್ ಸದಸ್ಯ ಸುನಿಲ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ಹಾಗೂ ಶುಂಠಿಕೊಪ್ಪ ರಕ್ಷಣಾ ವೇದಿಕೆಯ ಸದಸ್ಯರು ಪ್ರಶಾಂತ್ ಅವರ ಸಮಾಜಮುಖಿ ಕಾರ್ಯಕ್ಕೆ ಆರ್ಥಿಕ, ಪೆಟ್ರೋಲ್ ನೆರವು ನೀಡುವ ಮೂಲಕ ಬೆಂಬಲವಾಗಿ ಬೆನ್ನು ತಟ್ಟುತ್ತಿದ್ದಾರೆ.
0 comments:
Post a Comment