ಪೊಲೀಸ್-ಸಾರ್ವಜನಿಕರ ಮಧ್ಯೆ ಬೀದಿ ರಂಪಾಟಕ್ಕೆ ಕಾರಣವಾಗುತ್ತಿರುವ ಸರಕಾರದ ಗೊತ್ತು-ಗುರಿಯಿಲ್ಲದ ಕೋವಿಡ್ ಕಫ್ರ್ಯೂ - Karavali Times ಪೊಲೀಸ್-ಸಾರ್ವಜನಿಕರ ಮಧ್ಯೆ ಬೀದಿ ರಂಪಾಟಕ್ಕೆ ಕಾರಣವಾಗುತ್ತಿರುವ ಸರಕಾರದ ಗೊತ್ತು-ಗುರಿಯಿಲ್ಲದ ಕೋವಿಡ್ ಕಫ್ರ್ಯೂ - Karavali Times

728x90

14 May 2021

ಪೊಲೀಸ್-ಸಾರ್ವಜನಿಕರ ಮಧ್ಯೆ ಬೀದಿ ರಂಪಾಟಕ್ಕೆ ಕಾರಣವಾಗುತ್ತಿರುವ ಸರಕಾರದ ಗೊತ್ತು-ಗುರಿಯಿಲ್ಲದ ಕೋವಿಡ್ ಕಫ್ರ್ಯೂ

ಬಂಟ್ವಾಳ, ಮೇ 14, 2021 (ಕರಾವಳಿ ಟೈಮ್ಸ್) : ಈ ಬಾರಿ ಸರಕಾರ ಜನರಿಗೆ ಯಾವುದೇ ಪ್ಯಾಕೇಜ್ ಅಥವಾ ಆಹಾರ ಭದ್ರತೆಯನ್ನು ಘೋಷಿಸದೆ ಲಾಕ್ ಡೌನ್ ಇಲ್ಲ, ಇಲ್ಲವೇ ಇಲ್ಲ ಎಂದೇ ಎಲ್ಲ ಸಚಿವರು, ಮುಖ್ಯಮಂತ್ರಿಗಳು ಹೇಳುತ್ತಲೇ ಏಕಾಏಕಿ ಮಾಡಿದ ಲಾಕ್ ಡೌನ್ ಬಳಿಕ ಇತ್ತ ಸರಕಾರದ ಆದೇಶ ಪಾಲಿಸಲೂ ಆಗದೆ, ಪಾಲಿಸದೆ ಇರಲಿಕ್ಕೂ ಆಗದೆ ಇರುವ ಸಂಧಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಣಾಮವಾಗಿ ನಿರಂತರವಾಗಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಚಕಮಕಿ, ಘರ್ಷಣೆ ನಡೆಯುತ್ತಲೇ ಇದೆ. ಆದರೆ ಶುಕ್ರವಾರ ಮಾತ್ರ ಜನಪ್ರತಿಧಿ ಹಾಗೂ ಪೊಲೀಸರ ಮಧ್ಯೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದ ಪರಿಣಾಮ ಕ್ಷಣ ಮಾತ್ರ ಭಾರೀ ಸುದ್ದಿಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ-ವೀಡಿಯೋಗಳು ಹರಿದಾಡಿ ಪರ-ವಿರೋಧ ಚರ್ಚೆಗೂ ಕಾರಣವಾದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. 

ಗೋಳ್ತಮಜಲು ಕ್ಷೇತ್ರದ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ ಹಾಗೂ ಬಂಟ್ವಾಳ ನಗರ ಠಾಣಾ ಕರ್ತವ್ಯ ನಿರತ ಎಎಸ್‍ಐ ನಡುವೆ ಲಾಕ್ಡೌನ್ ನಿಯಮ ಉಲ್ಲಂಘನೆ ಸಂಬಂಧವಾಗಿ ತೀವ್ರ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡ ಪರಿಣಾಮ ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿತು. ಬಳಿಕ ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್ ಅವರು ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. 

ಚಕಮಕಿಯ ತೀವ್ರತೆಯ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಮೊಬೈಲ್ ಮೂಲಕ ವೀಡಿಯೋ ಚಿತ್ರೀಕರಣ ನಡೆಸಿದ್ದು, ಬಳಿಕ ಅದು ಸಾಮಾಜಿಕ ತಾಣಗಳಲ್ಲಿ ಸಕತ್ ವೈರಲ್ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. 

ತಾ ಪಂ ಸದಸ್ಯ ಮಹಾಬಲ ಆಳ್ವ ಅವರ ಸಂಬಂಧಿಕರೊಬ್ಬರು ಕಲ್ಲಡ್ಕ ಪೇಟೆಯ ಗಣೇಶ್ ಮೆಡಿಕಲ್ ಬಳಿ ಅಂಗಡಿಯೊಂದರಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಕರ್ತವ್ಯನಿರತ ಎಎಸ್‍ಐ ಅವರು ಲಾಠಿ ಬೀಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಮಧ್ಯ ಪ್ರವೇಶಿಸಿದ ಮಹಾಬಳ ಆಳ್ವ ಅವರು ಎಎಸ್‍ಐ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರೂ ಕೂಡಾ ಆಳ್ವ ಜೊತೆ ಸೇರಿಕೊಂಡು ಪೊಲೀಸರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಎಸ್‍ಐ ಕೂಡಾ ಈ ಸಂದರ್ಭ ಏರುಧ್ವನಿಯಲ್ಲೇ ದಬಾಯಿಸಿದ್ದು, ಸ್ಥಳದಲ್ಲಿ ಒಂದಷ್ಟು ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬಳಿಕ ಎಸ್ಸೈ ಅವರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆ ಬಗ್ಗೆ ವೀಡಿಯೋ ತುಣುಕು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಇದೀಗ ಪರ-ವಿರೋಧ ಚರ್ಚೆ ಆರಂಭವಾಗಿದೆ. 

ಕೆಲವರು ಘಟನೆಗೆ ಪೊಲೀಸರ ಅತಿರೇಕ ವರ್ತನೆಯೇ ಕಾರಣ ಎಂದು ಆರೋಪಿಸಿದರೆ, ಇನ್ನು ಕೆಲವರು ಕಾನೂನು ಸಾಮಾನ್ಯ ವರ್ಗಕ್ಕೆ ಒಂದು, ಬಿಜೆಪಿ ನಾಯಕರು-ಕಾರ್ಯಕರ್ತರಿಗೆ ಇನ್ನೊಂದು ಎಂಬಂತಿರಬಾರದು. ಎಲ್ಲರಿಗೂ ಕಾನೂನು ಒಂದೇ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯ ನಿರತ ಎಎಸ್‍ಐ ವಿರುದ್ದ ರೇಗಾಡಿದ್ದಲ್ಲದೆ ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟ ತಾ ಪಂ ಬಿಜೆಪಿ ಸದಸ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಹಗಲು-ರಾತ್ರಿ ಜನತೆಯ ನೆಮ್ಮದಿಗಾಗಿ ಕೋವಿಡ್ ವಾರಿಯರ್‍ಗಳಾಗಿ ಕಾರ್ಯನಿರ್ವಹಿಸುವ ಪೊಲೀಸರ ವಿರುದ್ದ ಬೀದಿಯಲ್ಲಿ ರಂಪಾಟ ನಡೆಸುವ ಯಾರನ್ನೇ ಆದರೂ ಕಾನೂನಿನ ಕುಣಿಕೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. 

ಲಾಕ್ ಡೌನ್, ಕೊರೋನಾ ಕಾರಣದಿಂದ ಜನ ಮೊದಲೇ ನಿತ್ರಾಣಗೊಂಡಿದ್ದು, ಸರಕಾರ ಯಾವುದೇ ಪರಿಹಾರವಾಗಲೀ, ಪ್ಯಾಕೇಜ್ ಆಗಲೀ ಘೋಷಣೆ ಮಾಡದೆ ಇರುವ ಕಾರಣದಿಂದ ಉದ್ಯೋಗವೂ ಇಲ್ಲದೆ, ಕೈಯಲ್ಲಿ ಬಿಡಿಗಾಸೂ ಇಲ್ಲದೆ ಜನ ತಮ್ಮ ಅಗತ್ಯತೆಗಳಿಗೆ ಒಂದು ಕ್ಷಣ ರಸ್ತೆಗೆ ಬಂದರೂ ಪೊಲೀಸರು ತೋರುವ ರೌದ್ರಾವತಾರದಿಂದಾಗಿ ತಕ್ಷಣ ರೋಶಾಗ್ನಿಯಾಗಿ ಪರಿವರ್ತನೆಗೊಳ್ಳುತ್ತಾರೆ. ಇತ್ತ ತೀವ್ರ ಬಂದೋಬಸ್ತ್ ಹಾಗೂ ಜನರನ್ನು ನಿಯಂತ್ರಿಸಿ ಸಾಕು ಸಾಕಾಗಿ ಹೋಗಿರುವ ಪೊಲೀಸರು ಕೂಡಾ ಒಂದಷ್ಟು ಹೆಚ್ಚು ಕಡಿಮೆ ಆದರೂ ಜನರ ಮೇಲೆ ರೇಗಾಡುತ್ತಾರೆ. ಪರಿಣಾಮ ಎರಡೂ ಕಡೆ ಹೊಂದಾಣಿಕೆ, ಅರ್ಥೈಸುವ ಕೊರತೆಯ ಕಾರಣದಿಂದಾಗಿ ಪರಸ್ಪರ ಮಾತಿನ ಚಕಮಕಿ, ಮಾತಿನ ವಿನಿಮಯಗಳು ನಡೆಯುತ್ತಲೇ ಇರುತ್ತದೆ. ಬಂಟ್ವಾಳದಲ್ಲಂತೂ ಕೆಲ ಪೊಲೀಸ್ ಸಿಬ್ಬಂದಿಗಳು ಪದೇ ಪದೇ ಕಿರಿಕ್ ಮಾಡುತ್ತಿರುವ ಸನ್ನಿವೇಶ ಕಂಡು ಬರುತ್ತಿದ್ದು, ಪ್ರತೀ ಬಾರಿಯೂ ಎಸ್ಸೈ ಅವಿನಾಶ್ ಅವರು ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಹೋಗುತ್ತಿದ್ದಾರೆ. ಆದರೂ ಕೆಲವೊಮ್ಮೆ ಕೈ ಮೀರಿ ಹೋಗುತ್ತಿದ್ದು, ಇಂತಹ ಅವಾಂತರಗಳು ನಡೆಯುತ್ತಿರುತ್ತದೆ. 

ಹಲವು ದೇಶಗಳು ಕೊರೋನಾ ನಿಯಂತ್ರಣಕ್ಕಾಗಿ ಜನತೆಯ ಪರವಾಗಿ ವಿವಿಧ ಯೋಜನೆಗಳನ್ನು ಘೋಷಿಸಿಕೊಂಡು ಜನರನ್ನು ಸ್ವಯಂ ನಿಯಂತ್ರಿಸುವ ಸನ್ನಿವೇಶ ನಿರ್ಮಿಸಿದ್ದರೆ, ಭಾರತದ ಕೆಲವೊಂದು ರಾಜ್ಯಗಳು ಕೂಡಾ ಜನತೆಯ ಪರವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಜನರನ್ನು ನಿಯಂತ್ರಿಸುತ್ತಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಜನತೆಯ ಪರವಾಗಿ ಯಾವುದೇ ಯೋಜನೆಗಳನ್ನು ಸರಕಾರ ಘೋಷಿಸದೆ ದಿನಕ್ಕೊಂದು ಮಾರ್ಗಸೂಚಿಗಳನ್ನು ಬದಲಾಯಿಸುತ್ತಾ, ಲಾಕ್ ಡೌನ್ ವಿಸ್ತರಣೆ, ಕಾನೂನು ಬಿಗಿ ಮೊದಲಾದ ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಾ ಕೇವಲ ಪೊಲೀಸ್ ಬಲ ಪ್ರಯೋಗಿಸುವ ಕಾರಣದಿಂದಾಗಿಯೇ ಜನ ಸ್ವಯಂ ನಿಯಂತ್ರಣಕ್ಕೆ ಒಳಗಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸ್-ಸಾರ್ವಜನಿಕರ ಮಧ್ಯೆ ಬೀದಿ ರಂಪಾಟಕ್ಕೆ ಕಾರಣವಾಗುತ್ತಿರುವ ಸರಕಾರದ ಗೊತ್ತು-ಗುರಿಯಿಲ್ಲದ ಕೋವಿಡ್ ಕಫ್ರ್ಯೂ Rating: 5 Reviewed By: karavali Times
Scroll to Top