ಬಂಟ್ವಾಳ, ಮೇ 01, 2021 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಕ್ರಾಸಿನಲ್ಲಿ ಎಪ್ರಿಲ್ 4 ರಂದು ರಾತ್ರಿ ತುಂಬೆ ನಿವಾಸಿ ಮನೋಜ್ ಸಪಲ್ಯ (30) ಅವರ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ತರ ಪ್ರಗತಿ ಸಾಧಿಸಿರುವ ಬಂಟ್ವಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಬಿ ಸಿ ರೋಡು ಸಮೀಪದ ನಿವಾಸಿಗಳಾದ ಇಮ್ರಾನ್ ಹಾಗೂ ಸಫ್ವಾನ್ ಎಂಬವರೇ ಆರೋಪಿಗಳು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಅಧಿಕೃತವಾಗಿ ದೃಢಪಡಿಸಬೇಕಷ್ಟೆ. ಎಪ್ರಿಲ್ 4 ರಂದು ರಾತ್ರಿ ಮನೋಜ್ ತುಂಬೆಯಿಂದ ಬಿ ಸಿ ರೋಡ್ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಜ್ಜಿಬೆಟ್ಟು ಕ್ರಾಸ್ ಬಳಿ ಅಂಗಡಿಯೊಂದರ ಮುಂಭಾಗ ಬೈಕಿ ನಿಲ್ಲಿಸಿದ್ದ ಮನೋಜ್‍ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ಬಳಿಕ ಪೊಲೀಸ್ ತನಿಖೆಯ ವೇಳೆ ಹಾದಿ ತಪ್ಪಿಸುವ ಉದ್ದೇಶದಿಂದ ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಮನೋಜ್ ವಿರುದ್ದ ಕಟ್ಟುಕತೆ ಕಟ್ಟಿ ಸಂದೇಶ ಹರಡಿದ್ದು, ಇರಿತ ಪ್ರಕರಣದಲ್ಲಿ ಮನೋಜ್ ಅವರ ಅಣ್ಣನ ಕೈವಾಡವಿದೆ ಎಂಬ ಸುಳ್ಳು ಸುದ್ದಿ ಈ ಸಂದೇಶದಲ್ಲಿ ಪ್ರಸ್ತಾಪಿಸಲಾಗಿತ್ತು.
ಬಂಟ್ವಾಳ ನಗರ ಠಾಣೆಯ ಕೂಗಳತೆಯ ಅಂತರದಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ನೇತೃತ್ವದ ಪೊಲೀಸ್ ತಂಡ ಸೂಕ್ಷ್ಮವಾಗಿ ತನಿಖೆ ನಡೆಸಿ ಇದೀಗ ಪ್ರಕರಣ ಬೇಧಿಸಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಆದರೆ ಇರಿತಕ್ಕೆ ನಿಖರ ಕಾರಣದ ಬಗ್ಗೆ ಪೊಲೀಸರು ಇನ್ನಷ್ಟೆ ಬಹಿರಂಗಪಡಿಸಬೇಕಿದೆ.
0 comments:
Post a Comment