ಮಂಗಳೂರು, ಜೂನ್ 20, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 5ರವರೆಗೆ ಕೊರೋನಾ ಲಾಕ್ ಡೌನ್ ವಿಸ್ತರಿಸಿ ಆದೇಶಿಸಿರುವ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಜನರಿಗೆ ಅಗತ್ಯ ವಸ್ತು ಖರೀದಿಸುವ ಸಮಯವನ್ನು ಬೆಳಿಗ್ಗೆ 7 ರಿಂದ 10 ಗಂಟೆವರೆಗೆ ಇದ್ದುದನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಸ್ತರಿಸಿದ್ದಾರೆ.
ಆಹಾರ ಸಾಮಾಗ್ರಿಗಳು, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ, ಬೀದಿ ಬದಿ ವ್ಯಾಪಾರದ ಜೊತೆಗೆ ಮದ್ಯ ಪಾರ್ಸೆಲ್ ಗೂ ಮಧ್ಯಾಹ್ನ 1 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ನಿರ್ಮಾಣ ಚಟುವಟಿಕೆ ಹಾಗೂ ಸ್ಟೀಲ್, ಸಿಮೆಂಟ್ ಅಂಗಡಿಗಳಿಗೂ ಅಸ್ತು ಎಂದಿರುವ ಡೀಸಿ ಬಸ್ಸು ಸಂಚಾರಕ್ಕೆ ಅವಕಾಶ ನೀಡಿಲ್ಲ.
ಅಟೋ ರಿಕ್ಷಾ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಗರಿಷ್ಠ ಇಬ್ಬರು ಪ್ರಯಾಣಿಕರು ಮಾತ್ರ ಎಂಬ ಶರತ್ತು ವಿಧಿಸಲಾಗಿದೆ.
ಜುಲೈ 5ರವರೆಗೆ ಸಂಜೆ 7 ರಿಂದ ಬೆಳಿಗ್ಗೆ 7ರವರೆಗೆ ರಾತ್ರಿ ಕಫ್ರ್ಯೂ ಜೊತೆಗೆ ವೀಕೆಂಡ್ ಕಫ್ರ್ಯೂ ಕೂಡಾ ಜಾರಿಗೊಳಿಸಲಾಗಿದೆ. ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7ರವೆಗೆ ವಾರಾಂತ್ಯ ನಿರ್ಬಂಧ ಇರಲಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಕಚೇರಿಗಳ ಜೊತೆಗೆ ಕೃಷಿ ಸಂಬಂಧಿತ ಕಚೇರಿಗಳು, ಲೋಕೋಪಯೋಗಿ ಇಲಾಖೆ, ವಸತಿ, ಪ್ರಾದೇಶಿಕ ಸಾರಿಗೆ ಕಚೇರಿಗಳು, ಸಹಕಾರ ಮತ್ತು ನಬಾರ್ಡ್, ಭಾರತ ಸರಕಾರದ ಕಂದಾಯ ಇಲಾಖಾ ಕಚೇರಿಗಳು ಕೂಡಾ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಜಿಲ್ಲೆಯಲ್ಲಿ ಪಾರ್ಕ್, ಉದ್ಯಾನವನಗಳನ್ನು ತೆರೆಯಲು ಅವಕಾಶ ಇಲ್ಲ. ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಗಳನ್ನು ಅನುಮತಿಸಲಾಗಿದೆ. ಕನ್ನಡಕ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಹ್ನ 1 ಗಂಟೆವರೆಗೆ ತೆರೆಯಲು ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment