ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನತೆಯನ್ನು ಕ್ಯೂ ನಿಲ್ಲಿಸಿದ್ದೇ ಸಾಧನೆ : ಡಿಕೆಶಿ ವಾಗ್ದಾಳಿ - Karavali Times ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನತೆಯನ್ನು ಕ್ಯೂ ನಿಲ್ಲಿಸಿದ್ದೇ ಸಾಧನೆ : ಡಿಕೆಶಿ ವಾಗ್ದಾಳಿ - Karavali Times

728x90

12 June 2021

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನತೆಯನ್ನು ಕ್ಯೂ ನಿಲ್ಲಿಸಿದ್ದೇ ಸಾಧನೆ : ಡಿಕೆಶಿ ವಾಗ್ದಾಳಿ

ಬೆಂಗಳೂರು, ಜೂನ್ 13, 2021 (ಕರಾವಳಿ ಟೈಮ್ಸ್) : ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆಸ್ಪತೆಯಲ್ಲಿ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನರನ್ನು ಕ್ಯೂ ನಿಲ್ಲುವಂತೆ ಮಾಡಿರುವುದೇ ದೊಡ್ಡ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. 

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಶನಿವಾರ ಬಡವರಿಗೆ ಆಹಾರ ಕಿಟ್ ಹಾಗೂ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ವಿಚಾರಕ್ಕೂ ನಿಮ್ಮನ್ನೆಲ್ಲ ಕ್ಯೂ ನಿಲ್ಲಿಸಿದರಲ್ಲಾ ಅಂತಾ ಸಂಕಟವಾಗುತ್ತಿದೆ. ನೋಟು ರದ್ದು ಮಾಡಿ, ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ಕ್ಯೂ ನಿಲ್ಲಿಸಿ ಸಾಯಿಸಿದರು. ನಂತರ ಆಧಾರ್ ಜೋಡಣೆ ವಿಚಾರವಾಗಿ ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ದೇಶಕ್ಕೆ ಮಹಾಮಾರಿ ಕರೆತಂದು, ಆಸ್ಪತ್ರೆ ಮುಂದೆ ಕ್ಯೂ, ಆಂಬುಲೆನ್ಸ್ ಗೂ ಕ್ಯೂ, ಔಷಧಿಗೂ ಕ್ಯೂ, ಆಕ್ಸಿಜನ್ ಗೂ ಕ್ಯೂ, ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು ಎಂದು ಕಿಡಿ ಕಾರಿದರು. 

 ಈಗ ಆಹಾರ ಕಿಟ್ ಕೊಡಲು ನಾವು ನಿಮ್ಮನ್ನು ಕ್ಯೂ ನಿಲ್ಲಿಸಿದ್ದೇವೆ. ಇದು ಸರಕಾರದ ಆಹಾರ ಕಿಟ್ ಅಲ್ಲ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದಿಂದ ಸಂಪಾದಿಸಿದ ಸ್ವಂತ ಹಣದಲ್ಲಿ ನೀಡುತ್ತಿರುವ ಕಿಟ್. ಬೆಂಗಳೂರಿನಿಂದ ದಿಲ್ಲಿವರೆಗೆ ದೇಶದಲ್ಲಿ ನೀವು ಬದಲಾವಣೆ ತರಬೇಕು ಎಂದು ಕರೆ ನೀಡಿದ ಡಿಕೆಶಿ ಚುನಾವಣೆ ಕಾರಣಕ್ಕೆ ನಾವು ಇಲ್ಲಿಗೆ ಬಂದು ಈ ಕಾರ್ಯಕ್ರಮ ಮಾಡುತ್ತಿಲ್ಲ. ದೇಶದೆಲ್ಲೆಡೆ ಜನ ಸಂಕಟದಲ್ಲಿದ್ದು, ಅವರಿಗೆ ಸಹಾಯ ಮಾಡಲು ನಾವು ಈ ಇಲ್ಲಿಗೆ ಬಂದಿದ್ದೇವೆ. ನಾವು ಮಾಡುವ ಸಹಾಯದಿಂದ ನಿಮ್ಮ ಜೀವನ ಉದ್ಧಾರವಾಗುತ್ತದೆ ಎಂದು ಹೇಳುತ್ತಿಲ್ಲ. ಆದರೆ ಕಷ್ಟದಲ್ಲಿರುವ ಜನರ ಭಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು. 

ಬಡವರು, ಮಧ್ಯಮ ವರ್ಗದವರು ತಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ಚಿನ್ನ ಅಡವಿಟ್ಟು ಜೀವನ ಮಾಡಲು ಮುಂದಾಗಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯೋಗ ಕೊಡುತ್ತೇವೆ ಎಂದವರು ವಿದ್ಯಾವಂತರಿಗೆ ಪಕೋಡಾ ಮಾರಲು ಹೇಳಿದರು. ಪಕೋಡಾ ಮಾಡುವ ಅಡುಗೆ ಎಣ್ಣೆ ಬೆಲೆಯನ್ನು 200 ರೂಪಾಯಿಗೆ ಹೆಚ್ಚಿಸಿದ್ದಾರೆ. ಇಡೀ ದೇಶದ ಜನರನ್ನು ಬಡತನಕ್ಕೆ ನೂಕಿದ್ದಾರೆ ಎಂದ ಕೆಪಿಸಿಸಿ ಅಧ್ಯಕ್ಷರು ದೇಶದಲ್ಲಿ ಪೆಟ್ರೋಲ್ ಮೂಲ ಬೆಲೆ 35 ರೂಪಾಯಿ, ಅದಕ್ಕೆ ತೆರಿಗೆ 65 ರೂಪಾಯಿ. ನೆರೆ ರಾಷ್ಟ್ರಗಳಲ್ಲಿ ಅರ್ಧದಷ್ಟಿದ್ದರೂ ನಮ್ಮಲ್ಲಿ ಮಾತ್ರ ಬೆಲೆ ಹೆಚ್ಚುತ್ತಲೇ ಇದೆ. ಈ ಸರಕಾರ ದಿನಾ ಜನರ ಜೇಬಿನಿಂದ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ನಮ್ಮ ನಾಯಕರು ತಮ್ಮ ಸ್ವಂತ ಹಣದಲ್ಲಿ ನಿಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ನಮ್ಮ ನಾಯಕರೆಲ್ಲರೂ ಹಣ ಸೇರಿಸಿ ಈ ಕ್ಷೇತ್ರದ ಬಡ ಕುಟುಂಬಗಳಿಗೆ ತಲಾ 1 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಲು ನಾನಿಲ್ಲಿಗೆ ಬಂದಿದ್ದೇನೆ. ಈ ಹಣ ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸದೆ ಇರಬಹುದು. ಆದರೆ ಕಷ್ಟಕಾಲದಲ್ಲಿ ನಿಮ್ಮ ಜತೆ ನಿಲ್ಲಲು ನಮ್ಮ ನಾಯಕರು ಮುಂದೆ ಬಂದಿದ್ದಾರೆ. ಅನೇಕರಿಗೆ ಊಟಕ್ಕೆ, ಔಷಧಿಗೆ ಹಣವಿರುವುದಿಲ್ಲ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಈ ಹೆಜ್ಜೆ ಇಟ್ಟಿದ್ದಾರೆ. ಆ ಮೂಲಕ ನಿಮ್ಮ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ ಎಂದ ಶಿವಕುಮಾರ್ ಕಳೆದ ಬಾರಿ ಹಾಲು ಕೇಳಿದವರಿಗೆ ಐಪಿಸಿ ಸೆಕ್ಷನ್ 307 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಬಿಜೆಪಿ ನಾಯಕರು ಪೊಲೀಸರನ್ನು ಬಳಸಿಕೊಂಡು ಮೂರ್ನಾಲ್ಕು ಕೇಸ್ ಹಾಕಿಸಿದ್ದಾರೆ ಎಂದು ಒಬ್ಬರು ಹೆಣ್ಣು ಮಗಳು ಹೇಳುತ್ತಿದ್ದರು. ಆ ರೀತಿ ನಿಮಗೆ ಯಾರಾದರೂ ಯಾವುದೇ ತೊಂದರೆ ಕೊಟ್ಟರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ರಕ್ಷಣೆಗೆ ಕಾಂಗ್ರೆಸ್ ಸದಾ ನಿಲ್ಲಲಿದೆ. 

ಮುಂದಿನ ದಿನಗಳಲ್ಲಿ ಕಾರ್ಪೊರೇಷನ್ ಚುನಾವಣೆ ಬರುತ್ತಿದೆ, ವಿಧಾನಸಭೆ ಚುನಾವಣೆಯೂ ಬರಲಿದೆ. ನೀವು ಬಿಜೆಪಿಯವರಿಗೆ ಬುದ್ದಿ ಕಲಿಸಬೇಕು. ನಾವು ನಿಮ್ಮ ಜತೆ ಇರುತ್ತೇವೆ‌ ಎಂದು ಭರವಸೆ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನತೆಯನ್ನು ಕ್ಯೂ ನಿಲ್ಲಿಸಿದ್ದೇ ಸಾಧನೆ : ಡಿಕೆಶಿ ವಾಗ್ದಾಳಿ Rating: 5 Reviewed By: karavali Times
Scroll to Top