ಬಂಟ್ವಾಳ, ಜೂನ್ 07, 2021 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ, ಬಂಟ್ವಾಳ ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಕೋವಿಡ್ ಬಾಧಿತ ಕುಟುಂಬಗಳಿಗೆ ಇಂದಿರಾ ಕ್ಷೇಮ ನಿಧಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಸೋಮವಾರ ಬಿ ಸಿ ರೋಡಿನಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ರಮಾನಾಥ ರೈ, ಸರಕಾರ ಕಳೆದ ಬಾರಿ ಲಾಕ್ ಡೌನ್ ಸಂದರ್ಭ ಘೋಷಿಸಿದ ಪರಿಹಾರ ಮೊತ್ತಗಳೇ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ, ಪ್ರಾಕೃತಿಕ ವಿಕೋಪ ಪರಿಹಾರಗಳೂ ದಕ್ಕಿಲ್ಲ. ಇನ್ನು ಈ ಬಾರಿಯ ಪರಿಹಾರ ಆದರೂ ಜನರಿಗೆ ದಕ್ಕುತ್ತದೆ ಎಂಬ ಭರವಸೆ ಜನತೆಗೆ ಉಳಿದಿಲ್ಲ. ಜನರನ್ನು ಸಂಪೂರ್ಣವಾಗಿ ಮೋಸಗೊಳಿಸಿರುವ ಬಿಜೆಪಿ ಸರಕಾರಗಳು ಗಾಯದ ಮೇಲೆ ಬರೆ ಎಂಬಂತೆ ಬಡವರಿಗೆ ಇದ್ದ ಬಿಪಿಎಲ್ ಪಡಿತರ ಚೀಟಿಯನ್ನೂ ರದ್ದುಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ರದ್ದುಗೊಳಿಸಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಕ್ಷಣ ವಾಪಾಸು ನೀಡಬೇಕು ಎಂದು ಆಗ್ರಹಿಸಿದ ರೈ, ಬಿಜೆಪಿ ಸರಕಾರಗಳು ಜನರಿಗಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ ಇರುವ ಯೋಜನೆಗಳನ್ನು ರದ್ದುಗೊಳಿಸುತ್ತಾ ಸಾಗುತ್ತಿರುವುದು ಅಕ್ಷಮ್ಯ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಸರಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳೇ ಇಂದಿನ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಫಲ ನೀಡಿರುವುದು ಎಂದು ರಮಾನಾಥ ರೈ ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಅಧಿಕಾರ ಇದ್ದರೂ ಇಲ್ಲದಿದ್ದರೂ ಬಡ ಜನರ ಪರ ಎಂದೂ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಲಾಕ್ ಡೌನ್ ಸಂದರ್ಭದಲ್ಲೂ ಪಕ್ಷದ ಎಲ್ಲಾ ಘಟಕಗಳೂ ಕೂಡಾ ಸಕ್ರಿಯ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನಿರಂತರವಾಗಿ ಜನರ ಪರವಾಗಿ ತೊಡಗಿಸಿಕೊಂಡಿದೆ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಎಂ ಎಸ್ ಮುಹಮ್ಮದ್, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಗಂಗಾಧರ, ಜನಾರ್ದನ ಚೆಂಡ್ತಿಮಾರ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment