ಬೆಂಗಳೂರು, ಜೂನ್ 02, 2021 (ಕರಾವಳಿ ಟೈಮ್ಸ್) : ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರನ್ನು ರಷ್ಯಾ ಸರಕಾರದ ಪ್ರತಿಷ್ಠಿತ `ಗೋಲ್ಡನ್ ಪೀಸ್ ಮೇಕರ್ ಸ್ಟಾರ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಶ್ವನಾಥ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾರಿಷಸ್ ನ ಮಿನಿಸ್ಟರ್ ಕೌನ್ಸೆಲರ್ ಜೆ. ಬಿಸ್ಸೊಂಡೊಯಾಲ್ ಅವರು ಈ ಪ್ರಶಸ್ತಿಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ನ ಅಧ್ಯಕ್ಷ ಸಂದೀಪ್ ಮಾರ್ವ ಹಾಗೂ ರಷ್ಯಾ ಸರಕಾರದ ಸಚಿವ ಗಾಡ್ಝಿಮುರಾಡ್ ಒಮರೊವ್ ಅವರು ಹಾಜರಿದ್ದು, ವಿಶ್ವನಾಥ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸಮಾಜ ಸೇವೆಯಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಕೋವಿಡ್-19 ಬಿಕ್ಕಟ್ಟು ಶಮನವಾದ ನಂತರ ವಿಶ್ವನಾಥ್ ಅವರನ್ನು ರಷ್ಯಾಗೆ ಆಮಂತ್ರಿಸಿ ಅಲ್ಲಿನ ಸಂಸತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್ ದೂರದ ರಷ್ಯಾ ದೇಶದವರು ನನ್ನ ಜನ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇದರಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ ಮತ್ತು ನಾನು ಕಳೆದ ಮೂರು ದಶಕಗಳಿಂದ ನಡೆಸುತ್ತಿರುವ ಜನಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಶಕ್ತಿ ಮತ್ತು ಸ್ಫೂರ್ತಿಯನ್ನು ತುಂಬಿದಂತಾಗಿದೆ ಎಂದು ಹೇಳಿದ್ದಾರೆ.
0 comments:
Post a Comment