ಬೆಂಗಳೂರು, ಜೂನ್ 28, 2021 (ಕರಾವಳಿ ಟೈಮ್ಸ್) : ಕೊರೋನ 2ನೇ ಅಲೆಯ ತೀವ್ರತೆ ಹಾಗೂ ಲಾಕ್ ಡೌನ್ ಕಾರಣದಿಂದ ಅನಿಶ್ಚಿತತೆಯಲ್ಲಿದ್ದ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊನೆಗೂ ಶಿಕ್ಷಣ ಸಚಿವ ಸುರೇಶ್ ದಿನಾಂಕ ಘೋಷಣೆ ಮಾಡಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು ಈ ದಿನಾಂಕ ಘೋಷಣೆ ಮಾಡಿದ್ದಾರೆ.
ಎರಡು ದಿನಗಳಲ್ಲಿ ಈ ಬಾರಿ ಪರೀಕ್ಷೆ ಮುಗಿಸಲಾಗುತ್ತಿದ್ದು, ಮೊದಲ ದಿನ ಅಂದರೆ ಜುಲೈ 19 ರಂದು ಕೋರ್ ಸಬ್ಜೆಕ್ಟ್ ಗಳಾದ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಮೇಲೆ ಪರೀಕ್ಷೆ ನಡೆಯಲಿದ್ದು, ಜುಲೈ 22 ರಂದು ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ವಿಷಯಗಳ ಮೇಲೆ ಪರೀಕ್ಷೆ ನಡೆಯಲಿದೆ ಎಂದ ಸಚಿವರು ಬೆಳಗ್ಗೆ 10.30ರಿಂದ 1.30ರ ತನಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರತಕ್ಕದ್ದು ಎಂದರು.
ಈ ವರ್ಷ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ವರ್ಷ 73,066 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ ಎಂದು ಸಚಿವರು ಈ ಎಲ್ಲಾ ಸುರಕ್ಷಾ ಕ್ರಮಗಳನ್ನು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಕೈಗೊಳ್ಳಲಿದೆ. ಸಾಮಾಜಿಕ ಅಂತರ ಕಾಪಾಡಲು ಪ್ರತಿ ವಿದ್ಯಾರ್ಥಿಗಳ ಮಧ್ಯೆ 6 ಅಡಿ ಅಂತರ ಕಾಪಾಡಿಕೊಂಡು ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊಠಡಿಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
0 comments:
Post a Comment