ಬೆಂಗಳೂರು, ಜುಲೈ 26, 2021 (ಕರಾವಳಿ ಟೈಮ್ಸ್) : ರಾಜ್ಯದ ರಾಜಕೀಯ ಗೊಂದಲಗಳಿಗೆ ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಮೂಲಕ ಬಿ.ಎಸ್. ಯಡಿಯೂರಪ್ಪ ಸೋಮವಾರ ತೆರೆ ಎಳೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಸೋಮವಾರಕ್ಕೆ ಎರಡು ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ರಾಜೀನಾಮೆ ಇಂಗಿತ ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಶಿಕಾರಿಪುರಿಂದ ಬಿಜೆಪಿ ಪಕ್ಷದಿಂದ ನಾನು ರಾಜಕೀಯ ರಂಗ ಪ್ರವೇಶಿಸಿದ್ದೇನೆ. ಶಿಕಾರಿಪುರದಲ್ಲಿ ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸಿ, ಚುನಾವಣೆಯಲ್ಲಿ ಗೆದ್ದು, ಘಟಕದ ಅಧ್ಯಕ್ಷನಾಗಿ, ವಿಧಾನ ಸಭಾ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪಕ್ಷದ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದರು. ಶಿಕಾರಿಪುರದ ಜನ ನನ್ನನ್ನು ಏಳು ಬಾರಿ ಆಯ್ಕೆ ಮಾಡಿದ್ದಾರೆ. ರಾಷ್ಟ್ರೀಯ ನಾಯಕರು ನನ್ನನ್ನು ಬೆಂಬಲಿಸಿದ್ದಾರೆ. ಬಿಜೆಪಿ ನೀಡಿದ ಸ್ಥಾನಕ್ಕೆ, ಅವಕಾಶಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದ ಸಿಎಂ ವಿದಾಯ ಭಾಷಣದ ವೇಳೆ ಮಾತಿನಲ್ಲೇ ಭಾವುಕರಾದರು.
ಯಾರೂ ಅನ್ಯತಾ ಭಾವಿಸಬಾರದು, ನಾನು ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. ಊಟದ ಬಳಿಕ ರಾಜಭಾವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು.
75 ವರ್ಷ ದಾಟಿದ ಬಳಿವೂ ನನಗೆ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಶಬ್ದಗಳಲ್ಲಿ ಧನ್ಯವಾದ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಸಮಯದಲ್ಲಿ ನಾನು ಏಕಾಂಗಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ. ನಾನು ಮತ್ತು ಬೆಳ್ತಂಗಡಿಯ ವಸಂತ ಬಂಗೇರ ಅವರು ವಿಧಾನಸಭೆಗೆ ಆಯ್ಕೆಯಾದಾಗ, ವಸಂತ ಬಂಗೇರ ಅವರು ಹಠಾತ್ ಪಕ್ಷಕ್ಕೆ ಕೈಕೊಟ್ಟು ಹೊರ ಹೋದರು. ಆ ವೇಳೆ ನಾನು ಎದೆಗುಂದಲಿಲ್ಲ. ಹಿಂದಿರುಗಿ ನೋಡದೆ, ಒಬ್ಬನೇ ಎಂಬುವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಏಕಾಂಗಿ ಹೋರಾಟ ಮಾಡಿದೆ. ಆ ಮೂಲಕ ಇಂದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲನಾದೆ.
ನನ್ನ ಪಕ್ಷದ ಸೇವೆ ಗಮನಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗು ಅಂದಿದ್ದರು. ಆದರೆ, ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂದು ಅದನ್ನು ನಿರಾಕರಿಸಿದೆ ಎಂದು ಹೇಳಿ ಹಿಂದಿನ ಘಟನೆ ಸ್ಮರಿಸಿಕೊಂಡರು.
0 comments:
Post a Comment