ಬೆಂಗಳೂರು, ಜುಲೈ 27, 2021 (ಕರಾವಳಿ ಟೈಮ್ಸ್) : ಬಿ ಎಸ್ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ ಸಿಎಂ ಸ್ಥಾನಕ್ಕೆ ಕೊನೆಗೂ ಆಯ್ಕೆ ಅಂತಿಮಗೊಂಡಿದ್ದು, ಯಡಿಯೂರಪ್ಪ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದ ಲಿಂಗಾಯತ ಜಾತಿಗೆ ಸೇರಿದ ಬಸವರಾಜ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಆರಿಸಿದೆ. ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ಅಂತಿಮ ಆಯ್ಕೆ ನಡೆದಿದೆ.
ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ ಅವರ ಆಪ್ತ ವ್ಯಕ್ತಿಗೇ ಮತ್ತೆ ಸಿಎಂ ಹುದ್ದೆ ದಕ್ಕಿದೆ. ಜುಲೈ 28 ಬುಧವಾರ ಅಪರಾಹ್ನ 3.30ಕ್ಕೆ ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರಾಗಿರುವ ಬಸವರಾಜ್ ಬೊಮ್ಮಾಯಿ ಅವರು ಮೂಲ ಬಿಜೆಪಿಗರಾಗಿರದೆ 2008 ರಲ್ಲಿ ಜೆಡಿಎಸ್ ಪಕ್ಷದಿಂದ ಬಿಜೆಪಿ ಪಕ್ಷ ಸೇರಿದವರಾಗಿದ್ದಾರೆ ಎಂಬುದು ಗಮನಾರ್ಹ ಅಂಶ. ಬೊಮ್ಮಾಯಿ ಸಿಎಂ ಹುದ್ದೆಗೇರುವ ಮೂಲಕ ರಾಜ್ಯದಲ್ಲಿ ದೇವೇಗೌಡ-ಕುಮಾರಸ್ವಾಮಿ ಬಳಿಕ ತಂದೆ-ಮಗ ಸಿಎಂ ಹುದ್ದೆ ಅಲಂಕರಿಸುವ 2ನೇ ಉದಾಹರಣೆ ಇದಾಗಿದೆ.
ಬಸವರಾಜ ಬೊಮ್ಮಾಯಿ ಮೂಲತಃ ಜನತಾ ಪರಿವಾರದ ಹಿನ್ನೆಲೆ ಹೊಂದಿದವರು. ತಂದೆ ಎಸ್.ಆರ್. ಬೊಮ್ಮಾಯಿ ಜನತಾ ಪಕ್ಷದ ಪ್ರಬಲ ನಾಯಕರಾಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ತಂದೆಯ ಕಾಲದಲ್ಲಿ ಬಸವರಾಜ ಬೊಮ್ಮಾಯಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿಲ್ಲದಿದ್ದರೂ ಬಳಿಕ ಸಕ್ರಿಯ ರಾಜಕೀಯ ಪ್ರವೇಶಿಸಿ ಹಂತ ಹಂತವಾಗಿ ಮೇಲೆ ಬಂದವರು.
1998 ಹಾಗೂ 2004ರಲ್ಲಿ ಬೊಮ್ಮಾಯಿ ಎರಡು ಅವಧಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಆರಂಭಿಸಿದ್ದ ಅವರು 1999 ರಲ್ಲಿ ಜನತಾ ದಳ ವಿಭಜನೆ ಆದಾಗ ಸಂಯುಕ್ತ ಜನತಾ ದಳವನ್ನು ಆಯ್ಕೆ ಮಾಡಿಕೊಂಡಿದ್ದರು. ಬಳಿಕ 2008ರಲ್ಲಿ ಬಿಜೆಪಿ ಸೇರಿ ಹಾವೇರಿ ಜಿಲ್ಲೆಯ ಶಿಗ್ಗಾನ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಇವರು 2008 ರಲ್ಲಿ ಬೃಹತ್ ನೀರಾವರಿ ಸಚಿವರಾಗಿದ್ದರು.
0 comments:
Post a Comment