ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಾಲ್ ಟಿಕೆಟ್ ವಿತರಿಸಲು ಕ್ರಮ : ಶಿಕ್ಷಣ ಇಲಾಖಾ ಆಯುಕ್ತರ ಸುತ್ತೋಲೆ, ಹಾಲ್ ಟಿಕೆಟ್ ಗಾಗಿ ಶುಲ್ಕ ವಸೂಲಾತಿಗೆ ಬ್ರೇಕ್ ಹಾಕಿದ ಇಲಾಖೆ - Karavali Times ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಾಲ್ ಟಿಕೆಟ್ ವಿತರಿಸಲು ಕ್ರಮ : ಶಿಕ್ಷಣ ಇಲಾಖಾ ಆಯುಕ್ತರ ಸುತ್ತೋಲೆ, ಹಾಲ್ ಟಿಕೆಟ್ ಗಾಗಿ ಶುಲ್ಕ ವಸೂಲಾತಿಗೆ ಬ್ರೇಕ್ ಹಾಕಿದ ಇಲಾಖೆ - Karavali Times

728x90

15 July 2021

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಾಲ್ ಟಿಕೆಟ್ ವಿತರಿಸಲು ಕ್ರಮ : ಶಿಕ್ಷಣ ಇಲಾಖಾ ಆಯುಕ್ತರ ಸುತ್ತೋಲೆ, ಹಾಲ್ ಟಿಕೆಟ್ ಗಾಗಿ ಶುಲ್ಕ ವಸೂಲಾತಿಗೆ ಬ್ರೇಕ್ ಹಾಕಿದ ಇಲಾಖೆ

ಬೆಂಗಳೂರು, ಜುಲೈ 15, 2021 (ಕರಾವಳಿ ಟೈಮ್ಸ್) : ಕೆಲ ಖಾಸಗಿ ಶಾಲೆಗಳು ಶುಲ್ಕ ಪಾವತಿಗಾಗಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಹಾಲ್ ಟಿಕೆಟ್ ವಿತರಣೆಯನ್ನು ನೆಪವಾಗಿ ಬಳಸಕೊಳ್ಳುತ್ತಿವೆ ಎಂಬ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಿನ್ನೆ ಯಾವುದೇ ಮಗುವಿಗೂ ಪರೀಕ್ಷೆಗೆ ಸಂಬಂಧಪಟ್ಟಂತೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದ ಪ್ರಕಾರ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತ ವಿ ಅನ್ಬು ಕುಮಾರ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಾಲ್ ಟಿಕೆಟ್ (ಪ್ರವೇಶ ಪತ್ರ) ಸಿಗದೇ ಇದ್ದರೆ, ತಕ್ಷಣ ಹಾಲ್ ಟಿಕೆಟ್ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಎಲ್ಲಾ ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚಿಸಿದ್ದಾರೆ. 

ಯಾವುದೇ ವಿದ್ಯಾರ್ಥಿ ಹಾಲ್ ಟಿಕೆಟ್ ಸಿಗದೆ, ಮಾನಸಿಕ ತೊಂದರೆ ಮತ್ತು ಆತಂಕಕ್ಕೆ ಒಳಗಾಗದಂತೆ ಹಾಗೂ ಪರೀಕ್ಷೆಯಿಂದ ವಂಚಿತರಾಗದಂತೆ  ಆದ್ಯತೆಯ ಮೇರೆಗೆ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಶಾಲೆಗಳ ಮುಖ್ಯಸ್ಥರು ಕ್ರಮ ತೆಗೆದುಕೊಳ್ಳಬೇಕು ಎಂದು ಆಯುಕ್ತ ಅನ್ಬು ಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 

ಇದೇ ಜುಲೈ 19 ಹಾಗೂ 22 ರಂದು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಾಗಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖಾ ನಿರ್ದೇಶಕರ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದರು. 

ಮಕ್ಕಳಿಗೆ ಪರೀಕ್ಷಾಂಗಣ ಸುರಕ್ಷತೆ ಮತ್ತು ಆತ್ಮವಿಶ್ವಾಸ ಮೂಡಿಸಲು ಕ್ರಮ ವಹಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಒಎಂಆರ್ ಶೀಟ್ ಕುರಿತು ತಿಳಿವಳಿಕೆ ಮೂಡಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲೂ ಮೇಲ್ವಿಚಾರಕರು ಮಾರ್ಗದರ್ಶನ ನೀಡಲಿದ್ದಾರೆ. ಪರೀಕ್ಷೆಗೆ ಮೊದಲು ಮತ್ತು ನಂತರ ಪರೀಕ್ಷಾ ಕೇಂದ್ರದ ಆವರಣ ಮತ್ತು ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಶೇ 100ರಷ್ಟು ಪರೀಕ್ಷಾ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. 

ಪರೀಕ್ಷೆಗೆ ಎರಡು ದಿನಗಳ ಮೊದಲು ಈ ಪ್ರಕ್ರಿಯೆಗೆ ನೇಮಕಗೊಂಡಿರುವ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂ ಸೇವಕರು ಪರೀಕ್ಷಾ ಕೇಂದ್ರದಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಸಲಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಪೂರೈಕೆ ಸೇರಿದಂತೆ ಎಲ್ಲ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂ ಸೇವಕರು, ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಅಧೀಕ್ಷಕರು ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದ ಅವರು ಯಾವುದೇ ವಿದ್ಯಾರ್ಥಿ ವಾಹನ ಸೌಲಭ್ಯ ಇಲ್ಲದೆ ಪರೀಕ್ಷೆಗೆ ಗೈರು ಹಾಜರಾಗದಂತೆ ಗಮನಿಸಲು ಸೂಚಿಸಲಾಗಿದೆ. ಪ್ರವೇಶ ಪತ್ರ ತೋರಿಸಿ ಮಕ್ಕಳು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿ ಈಗಾಗಲೇ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಸಚಿವರು ವಿವರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಾಲ್ ಟಿಕೆಟ್ ವಿತರಿಸಲು ಕ್ರಮ : ಶಿಕ್ಷಣ ಇಲಾಖಾ ಆಯುಕ್ತರ ಸುತ್ತೋಲೆ, ಹಾಲ್ ಟಿಕೆಟ್ ಗಾಗಿ ಶುಲ್ಕ ವಸೂಲಾತಿಗೆ ಬ್ರೇಕ್ ಹಾಕಿದ ಇಲಾಖೆ Rating: 5 Reviewed By: karavali Times
Scroll to Top