ಬಂಟ್ವಾಳ, ಆಗಸ್ಟ್ 09, 2021 (ಕರಾವಳಿ ಟೈಮ್ಸ್) : ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೋರೇಟ್ ಕಂಪೆನಿಗಳು ಭಾರತ ಬಿಟ್ಟು ತೊಲಗಬೇಕೆಂದು ಆಗ್ರಹಿಸಿ ರೈತ ಕಾರ್ಮಿಕರಿಂದ ದೇಶ ವ್ಯಾಪಿ ಪ್ರತಿಭಟನೆ ನಡೆಯುತ್ತಿದ್ದು, ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನಲ್ಲಿ ಸೋಮವಾರ ರೈತ ಕಾರ್ಮಿಕರಿಂದ ಬಿ ಸಿ ರೋಡು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಅವರು, 1942 ರ ಆಗಸ್ಟ್ 9 ರಂದು ದೇಶದ ವಿಮೋಚನಾ ಚಳುವಳಿಯಲ್ಲಿ ಒಂದು ಮಹತ್ವದ ದಿನವಾಗಿದೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆÉಯಡಿ ಅಸಂಖ್ಯಾತ ದೇಶಪ್ರೇಮಿಗಳು ಜೀವದ ಹಂಗು ತೊರೆದು ಹೋರಾಟಕ್ಕೆ ಧುಮುಕಿದ ದಿನವಾಗಿದೆ. ಆದರೆ ಇಂದು ಮತ್ತೆ ಕಾರ್ಪೋರೇಟ್ ಕಂಪೆನಿಗಳು ಭಾರತದಲ್ಲಿ ನೆಲೆಯೂರಿ ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದೆ. ದೇಶದ ಕೃಷಿ, ಕೈಗಾರಿಗೆ, ಸೇವಾ ವಲಯವನ್ನು ತಮ್ಮ ವಶಕ್ಕೆ ಪಡೆದಿದೆ. ದೇಶದ ಸಂಪತ್ತನ್ನು ರಕ್ಷಿಸಬೇಕಾದ ಕೇಂದ್ರ ಸರಕಾರ ಕಾರ್ಪೋರೇಟ್ ಪರವಾದ ಕಾನೂನುಗಳನ್ನು ರಚಿಸಿ ಈ ದೇಶದ ರೈತ, ಕಾರ್ಮಿಕರನ್ನು ಬೀದಿ ಪಾಲಾಗುವಂತೆ ಮಾಡಿದೆ. ರೈತ, ಕಾರ್ಮಿಕರು ಇಂದು ದೇಶದ್ಯಾಂತ ಸರಕಾರದ ಈ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದು. ಈ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ದುಡಿಯುವ ವರ್ಗಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಂಚಿಸುತ್ತಿವೆ. ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಮಾಲಕರ ಹಿತ ಕಾಯುತ್ತಿದೆ. ರಾಜ್ಯದಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಘೋಷಣೆಯಾದ ಕಟ್ಟಡ ಕಾರ್ಮಿಕರ ಪರಿಹಾರ ಇಂದಿಗೂ ಕಾರ್ಮಿಕರಿಗೆ ಸಿಕ್ಕಿಲ್ಲ. ಅಲ್ಲದೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗಾಗಿ ನೀಡಲ್ಪಡುವ ಆಹಾರ ಕಿಟ್‍ಗಳನ್ನು ಶಾಸಕರುಗಳು ತಮ್ಮ ಬೆಂಬಲಿಗರಿಗೆ ನೀಡಿ ವ್ಯಾಪಕ ಅವ್ಯವಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ಷರದಾಸೋಹ ನೌಕರರಿಗೆ ವೇತನ ಬಿಡುಗಡೆಯಾಗದೆ ನೌಕರರು ಕಷ್ಟದಲ್ಲಿದ್ದಾರೆ. ಜನಪ್ರತಿನಿಧಿಗಳು ಸಚಿವ ಸಂಪುಟದ ವಿಸ್ತರಣೆಯಲ್ಲಿ ಮಗ್ನÀರಾಗಿದ್ದು ಸರಕಾರದ ಈ ನೀತಿಗಳ ವಿರುದ್ಧ ಜನ ಒಟ್ಟಾಗಿ ಹೋರಾಟಕ್ಕೆ ಮುಂದಾಗಬೇಕೆಂದು ಅವರು ಇದೇ ವೇಳೆ ಕಾರ್ಮೀಕರಿಗೆ ಕರೆ ನೀಡಿದರು.
ಪ್ರಮುಖರಾದ ಉದಯ ಕುಮಾರ್ ಬಂಟ್ವಾಳ, ವಿನಯ ನಡುಮೊಗರು, ಸೇವಂತಿ, ದೇಜಪ್ಪ ಪೂಜಾರಿ, ಲಿಯಾಖತ್ ಖಾನ್, ಅಪ್ಪು ನಾಯ್ಕ, ನಾರಾಯಣ ಕೊೈಲೋಡಿ, ಈಶ್ವರ, ದಾಮೋದರ ಪರಕಜೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment