ಬಂಟ್ವಾಳ, ಆಗಸ್ಟ್ 03, 2021 (ಕರಾವಳಿ ಟೈಮ್ಸ್) : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಬಿಪಿಎಲ್ ಪಡಿತರ ಚೀಟಿ ಜನರಿಗೆ ಒದಗಿಸಿಕೊಟ್ಟ ತಾಲೂಕು ಬಂಟ್ವಾಳವಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ನೀತಿ ಸಂಹಿತೆಗೆ ಅನುಗುಣವಾಗಿ ಸರ್ವರ್ ಸ್ಥಗಿತಗೊಂಡು ಕಾರ್ಡ್ ವಿತರಣೆ ವಿಳಂಬವಾಗಿದ್ದ ಸಂದರ್ಭ ಬಿಪಿಎಲ್ ಕಾರ್ಡ್ ಹಾಗೂ ಬಡವರ ಹೆಸರಿನಲ್ಲಿ ರಾಜ್ಯಾದ್ಯಂತ ಡಂಗುರ ಸಾರಿದ್ದ ಬಿಜೆಪಿ ಇದೀಗ ಅವರದೇ ಸರಕಾರ ರಾಜ್ಯ ಕೇಂದ್ರ ಎರಡಲ್ಲೂ ಅಧಿಕಾರದಲ್ಲಿರುವಾಗ ಬೇಕಾಬಿಟ್ಟಿಯಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಯಾವುದೇ ಮಾಹಿತಿಯನ್ನೂ ನೀಡದೆ ರದ್ದುಪಡಿಸುವ ಮೂಲಕ ಕೋವಿಡ್ ಸಂಕಷ್ಟದ ಸಂದರ್ಭದಲ್ಲೇ ಬಡ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳದಲ್ಲಿ ಈ ಬಗ್ಗೆ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು ಇದೀಗ ಯುದ್ದೋಪಾದಿಯಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುವುದಲ್ಲದೆ ದಂಡವನ್ನೂ ವಿಧಿಸುವ ಮೂಲಕ ಬಡವರ ಗಾಯದ ಮೇಲೆ ಸರಕಾರ ಬರೆ ಎಳೆಯುತ್ತಿದೆ. ಈ ಮಧ್ಯೆ ಆಡಳಿತ ನಡೆಸುತ್ತಿರುವ ಪಕ್ಷಕ್ಕೆ ಸೇರಿದವರೇ ಇದೀಗ ಬಡವರಿಗೆ ತೊಂದರೆ ಆಗ್ತಿದೆ. ಬಿಪಿಎಲ್ ಪಡಿತರ ಚೀಟಿ ಕೊಡಿ ಎಂದು ಬೇಡಿಕೆ ಇಟ್ಟು ಆಗ್ರಹಿಸುತ್ತಿರುವ ನಾಟಕೀಯ ಬೆಳವಣಿಗೆ ಕೂಡಾ ನಡೆಯುತ್ತಿದ್ದು ಇದು ಹಾಸ್ಯಾಸ್ಪ ಎಂದರು.
ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿದ್ದು ಯಾರು? ಏಕೆ ರದ್ದುಪಡಿಸಿದ್ದಾರೆ? ಇದಕ್ಕೆ ಕಾರಣ ಏನು? ಮತ್ತೆ ಕೊಡಿ ಎಂಬ ಆಗ್ರಹ ಯಾಕೆ? ಎಂದು ಪ್ರಶ್ನಿಸಿದ ರೈ ಬಡವರ ಬದುಕಿನ ಜೊತೆ ಪ್ರಚಾರದ ರಾಜಕೀಯ ಮಾಡುವುದನ್ನು ತಕ್ಷಣ ನಿಲ್ಲಿಸಿ. ಮಾತು ಮಾತಿಗೂ ರಾಜಧರ್ಮದ ಬಗ್ಗೆ ಭಾಷಣ ಬಿಗಿಯುವ ಬಿಜೆಪಿಗರು ಇದೀಗ ರಾಜಧರ್ಮ ಪಾಲನೆ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಎಂಬ ಪಕ್ಷ ಇರುವುದೇ ಕೇವಲ ಚುನಾವಣೆಗಾಗಿ ಹಾಗೂ ಓಟಿಗಾಗಿ. ಜನರ ಸಮಸ್ಯೆ, ಬಡವರ ಬದುಕಿನ ಬವಣೆ ಈ ಪಕ್ಷದ ನಾಯಕರಿಗೆ ಅರ್ಥವೇ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರಮಾನಾಥ ರೈ ಹೆದ್ದಾರಿ ಅಗಲೀಕರಣಕ್ಕೆ ಹಿಂದಿನ ಸರಕಾರವೇ 150 ಕೋಟಿ ಹಣ ಮಂಜೂರು ಮಾಡಿದ್ದು, ಅದರಲ್ಲಿ 100 ಕೋಟಿ ಕಾಮಗಾರಿಕೆ, ಉಳಿದ 50 ಕೋಟಿ ರೂಪಾಯಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡಲು ಎಂಬುದಾಗಿ ಪ್ರತ್ಯೇಕವಾಗಿ ಇಡಲಾಗಿದ್ದರೂ ಇದೀಗ ಬಿಜೆಪಿ ಪಕ್ಷಕ್ಕೆ ಸೇರಿದ ಮಂದಿಗಳೇ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ಆಗ್ರಹಿಸುತ್ತಿರುವುದರ ಹಿಂದೆಯೂ ರಾಜಕೀಯ ಬೇಳೆ ಬೇಯಿಸುವ ಷಡ್ಯಂತ್ರ ಇದೆ ಎಂದು ಹರಿಹಾಯ್ದರು.
ರಮಾನಾಥ ರೈ ಯಾವತ್ತೂ ಕೇವಲ ಸರಕಾರಕ್ಕೆ ಮನವಿ ಭರವಸೆಯ ಪತ್ರಿಕಾಗೋಷ್ಠಿ ನಡೆಸಿ ಪುಕ್ಕಟೆ ಪ್ರಚಾರ ಪಡೆದುಕೊಂಡಿಲ್ಲ. ಬದಲಾಗಿ ಸಂಪೂರ್ಣ ಕೆಲಸ ಮಾಡಿಸಿ ಆದೇಶ ಪತ್ರ ಕೈಯಲ್ಲಿ ಹಿಡಿದುಕೊಂಡು ಮಾತ್ರ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ್ದೇನೆಯೇ ಹೊರತು ಪ್ರಚಾರದ ರಾಜಕೀಯ ನಡೆಸಿಲ್ಲ ಎಂದ ಅವರು ಪರಿಹಾರ ಕೊಡಿ ಎಂಬ ಆಗ್ರಹ ಯಾಕೆ? ಈಗಾಗಲೇ ಮಂಜೂರಾದ ಹಣ ಕೊಡಲು ಸಮಸ್ಯೆ ಏನು? ರಾಜಕೀಯಕ್ಕಾಗಿ ಏನಾದರೂ ನಡೆಯುತ್ತಿರುವ ಸಂಶಯ ಕಾಡುತ್ತಿದೆ ಎಂದ ಶಂಕಿಸಿದರಲ್ಲದೆ ಪರಿಹಾರ ಶೀಘ್ರ ಕೊಡಬೇಕಾದುದು ಸಜೀವ ಸರಕಾರದ ಜವಾಬ್ದಾರಿ ಎಂದರು.
ತುಂಬೆ ವೆಂಟೆಡ್ ಡ್ಯಾಂ ಕಾಮಗಾರಿ ಬಗ್ಗೆ ಕೂಡಾ ನಾನು ಸಚಿವನಾಗಿರುವಾಗಲೇ ನಮ್ಮ ಸರಕಾರದಿಂದ ಪರಿಹಾರ ಮೊತ್ತ ಮಂಜೂರು ಮಾಡಿಸಿದ್ದೇನೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಭೂಮಿ ಕಳಕೊಂಡವರ ಹೋರಾಟಕ್ಕಿಂತ ಭೂಮಿ ಹೋಗದವರ ಹೋರಾಟ ದೊಡ್ಡ ಮಟ್ಟದಲ್ಲಿದೆ ಎಂಬ ಅಧಿಕಾರಿಗಳ ಮಾತಿಗೂ ಬೆಲೆ ಕೊಡಬೇಕಾಗಿದೆ ಎಂದು ಝಾಡಿಸಿದರು.
ಸಾಮಾಜಿಕ ಬದುಕಿನಲ್ಲಿ ರಮಾನಾಥ ರೈ ಯಾವುದಾದರೂ ಭ್ರಷ್ಟಾಚಾರ ಅಥವಾ ಅಕ್ರಮ ಆಸ್ತಿ ಸಂಪಾದನೆಯಂತಹ ಕೃತ್ಯ ಮಾಡಿದ್ರೆ ಬಹಿರಂಗವಾಗಿ ಕೇಳಿದರೆ ಅದಕ್ಕೆ ನಾನು ಉತ್ತರ ಕೊಡಬಲ್ಲೆ ಎಂದು ಸವಾಲೆಸೆದ ಮಾಜಿ ಸಚಿವರು ನಮ್ಮ ಅಧಿಕಾರಾವಧಿ ಸಂದರ್ಭ ಅಕ್ರಮ ಮರಳುಗಾರಿಕೆ, ಮರಳು ಮಾಫಿಯಾ ಎಂದೆಲ್ಲಾ ಅನಗತ್ಯ ಆರೋಪಗಳನ್ನು ಮಾಡಿ, ರಾಜಧರ್ಮ ಮಾತಿನ ಭರವಸೆ ನೀಡಿದವರ ಅಧಿಕಾರಾವಧಿಯಲ್ಲಿ ಇದೀಗ ಅನಧಿಕೃತ ಮರಳುಗಾರಿಕೆ ಕಡೆ ಮುಖ ಹಾಕಬೇಡಿ ಎಂದು ಪೆÇಲೀಸರಿಗೆ ಹುಕುಂ ಹೊರಡಿಸುತ್ತಿರುವ ಪ್ರಕರಣಗಳು ದಾಖಲೆ ಸಹಿತ ಮುಂದಿಡಬಲ್ಲೆ ಎಂದು ಕಾಲೆಳೆದರು. ನಮ್ಮ ಅವಧಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದವರೆಲ್ಲರೂ ಗಣಿ ಇಲಾಖೆಯಿಂದ ಪರವಾನಿಗೇ ಪಡೆದೇ ಮಾಡಿದ್ದರು. ಆದರೆ ಇದೀಗ ಪರವಾನಿಗೆ ರಹಿತವಾಗಿಯೇ ಕ್ಷೇತ್ರದ ವಿವಿಧೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲದೆ ಅದೇ ಅಕ್ರಮ ಮರಳುಗಾರಿಕೆ ನಡೆಸುವ ವ್ಯಕ್ತಿಗಳ ಮನೆಯಲ್ಲೆ ಪೆÇಲೀಸರಿಗೆ ಊಟ ಚಾ ನೀಡುತ್ತಿರುವ ಪ್ರಸಂಗಗಳೂ ನಡೆಯುತ್ತಿದೆ ಎಂದವರು ಗಂಭೀರ ಆರೋಪ ಮಾಡಿದರು.
ನಾನು ಮಂತ್ರಿ ಆಗಿದ್ದ ವೇಳೆ ನನ್ನ ಮೇಲೆ ಮಾಡಲಾಗಿದ್ದ ಇಲ್ಲ ಅಲ್ಲದ ಆರೋಪಗಳನ್ನು ತಾಕತ್ತಿದ್ದರೆ ಒಂದು ಶೇಕಡಾ ಆದರೂ ಸಾಬೀತುಪಡಿಸಿದರೆ ರಾಜಕೀಯ ಸನ್ಯಾಸ ಮಾತ್ರವಲ್ಲ ಸಾಮಾಜಿಕ ಬದುಕಿನಿಂದಲೇ ನಿವೃತ್ತಿಯಾಗುವುದಾಗಿ ಸವಾಲು ಹಾಕಿದ ರಮಾನಾಥ ರೈ ನನ್ನ ಕೊನೆಯ ಹತ್ತು ವರ್ಷದ ಅವಧಿಯಲ್ಲಿ ಆದ ವರ್ಗಾವಣೆಗಿಂತ ಇದೀಗಿನ ಶಾಸಕರ ಅವಧಿಯಲ್ಲಿ ಹೆಚ್ವು ವರ್ಗಾವಣೆ ಆಗಿದೆ ಎಂದವರು ಬೊಟ್ಟು ಮಾಡಿದರು.
ಬಿ ಸಿ ರೋಡಿನಲ್ಲಿ ಎರಡು ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಯಾರಿಗೋ ಆಗಿದ್ದು, ಕೆಲಸ ಯಾರೋ ಮಾಡಿಸುತ್ತಿದ್ದು ಬಹಿರಂಗವಾಗಿಯೇ ಕಂಡು ಬರುತ್ತಿದ್ದು ಇದೇನಾ ರಾಜಧರ್ಮ ಎಂದು ಟೀಕಿಸಿದ ರೈ ಕೋವಿಡ್ ಪರಿಹಾರ ನಿಟ್ಟಿನಲ್ಲಿ ಕಾರ್ಮಿಕ ಮಂಡಳಿ ನೀಡುತ್ತಿರುವ ಆಹಾರ ಕಿಟ್ ನೈಜ ಕಾರ್ಮಿಕರಿಗೆ ಇನ್ನೂ ಸಿಕ್ಕಿಲ್ಲ. ಯಾರದೋ ಮನೆಯಲ್ಲಿ ಇದನ್ನು ಸಂಗ್ರಹಿಸಿ ನೀಡಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರಿಗೆ ಖುಷಿ ಬಂದವರಿಗೆ ಈ ಕಿಟ್ ನೀಡ್ತಾ ಇರೋದು ಕೂಡಾ ಗುಟ್ಟಾಗಿ ಉಳಿದಿಲ್ಲ ಎಂದು ಆರೋಪಿಸಿದರಲ್ಲದೆ ಈ ಬಗ್ಗೆ ಸ್ವತಃ ಕಾರ್ಮಿಕ ಅಧಿಕಾರಿಗೇ ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಮಿಕರ ಆಹಾರ ಕಿಟ್‍ಗಳನ್ನು ಸರಕಾರದ ಶಿಷ್ಟಾಚಾರದಂತೆ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ನೀಡಲಿ ಎಂದವರು ಇದೇ ವೇಳೆ ಆಗ್ರಹಿಸಿದರು.
ಕೆಎಸ್‍ಆರ್‍ಟಿಸಿ ಕೋವಿಡ್ ತುರ್ತು ಚಿಕಿತ್ಸಾ ಬಸ್ಸಿನಲ್ಲಿ ನೀಡಲಾಗುತ್ತಿರುವ ತಪಾಸಣೆ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಜಾಗವಿದ್ದರೂ ಅದನ್ನು ಬಿಟ್ಟು ಪಂಚಾಯತ್ ಅಂಗಳದಲ್ಲಿ ಕೊಡುವಂತಹ ರಾಜಕೀಯ ಕೂಡಾ ನಡೆಯುತ್ತಿದೆ ಎಂದು ದೂರಿದ ಅವರು ಕೋವಿಡ್ ತಪಾಸಣಾ ಬಸ್ಸು ಬಿಜೆಪಿ ಬೆಂಬಲಿತರ ಪಂಚಾಯತ್ ಇರುವೆಡೆ ಪಂಚಾಯತ್ ಅಧ್ಯಕ್ಷರಿಗೆ ಉಸ್ತುವಾರಿ ನೀಡಲಾಗುತ್ತಿದ್ದರೆ, ಬಿಜೆಪಿ ಬೆಂಬಲಿತರ ಪಂಚಾಯತ್ ಇಲ್ಲದ ಕಡೆ ಬಿಜೆಪಿ ಕಾರ್ಯಕರ್ತನಿಗೆ ಜವಾಬ್ದಾರಿ ನೀಡುವ ಮೂಲಕ ಒಂದು ರೀತಿಯ ದ್ವಂದ್ವ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜಧರ್ಮ ಪಾಲನೆ ಬಗ್ಗೆ ಕೇವಲ ಭಾಷಣ ಬಿಗಿದರೆ ಸಾಲದು. ಅದು ಪಾಲನೆಯಲ್ಲಿ ಆಗಬೇಕಾಗಿದೆ. ಕ್ಷೇತ್ರದಲ್ಲಿ ಜಾತಿ, ಧರ್ಮ, ಭಾಷೆ, ವರ್ಗ, ಪಂಗಡಗಳ ಎಲ್ಲ ಎಲ್ಲೆಯನ್ನು ಮೀರಿ ನಾನು ಕೆಲಸ ಮಾಡಿದ್ದೇನೆ ಅದು ರಾಜಧರ್ಮ ಎಂದ ರಮಾನಾಥ ರೈ ಮತೀಯವಾದಿ ಜಾತಿವಾದಿ ಎಂಬ ಹಣೆಪಟ್ಟಿ ನಾನು ಇದುವರೆಗೂ ಕಟ್ಟಿಕೊಂಡಿಲ್ಲ. ಸೌಹಾರ್ದ ಸಮಾಜ ನನಗೆ ನೀಡಿದ ದೊಡ್ಡ ಕಿರೀಟ ಅದುವೇ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
13 ವರ್ಷ ಈ ರಾಜ್ಯದ ಮಂತ್ರಿಯಾಗಿ ನನಗೆ ಏನು ಬೇಕಾದರೂ ಸಂಪಾದಿಸಬಹುದಿತ್ತು. ಆದರೆ ನಾನು ಜನರ ಪ್ರೀತಿ ಸಂಪಾದಿಸಿದ್ದೇನೆ ಅದುವೇ ದೊಡ್ಡ ಸಂಪತ್ತು. ಅದು ಬಿಟ್ಟು ಯಾವುದೇ ಮಣ್ಣಿನ ವ್ಯಾಪಾರವಾಗಲೀ, ಗಣಿ ಇಲಾಖೆಯಲ್ಲಿ ಯಾವುದೇ ಅಕ್ರಮ ವ್ಯವಹಾರವಾಗಲೀ ನನಗಿಲ್ಲ ಎಂದು ಸಾರಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಯಿಲಪ್ಪ ಸಾಲ್ಯಾನ್, ಜನಾರ್ದನ ಚೆಂಡ್ತಿಮಾರ್, ಧನಲಕ್ಷ್ಮಿ ಸಿ ಬಂಗೇರಾ, ಮಲ್ಲಿಕಾ ವಿ ಶೆಟ್ಟಿ, ಲವೀನಾ ವಿಲ್ಮಾ ಮೊರಾಸ್ ಮೊದಲಾದವರು ಜೊತೆಗಿದ್ದರು.
0 comments:
Post a Comment