ಬಂಟ್ವಾಳ, ಆಗಸ್ಟ್ 07, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ನಿವಾಸಿ ಕಿಟ್ಟ ನಾಯ್ಕ ಅವರ ಪುತ್ರ ಸುಂದರ (30) ಎಂಬಾತನನ್ನು ಆತನ ಅಣ್ಣ ರವಿ ಎಂಬಾತ ತನ್ನ ಪತ್ನಿ ಜೊತೆ ತಮ್ಮನಿಗೆ ಅನೈತಿಕ ಸಂಬಂಧ ಶಂಕಿಸಿ ಅಡಿಕೆ ಸಲಾಕೆಯಿಂದ ಬಡಿದು ಶುಕ್ರವಾರ ರಾತ್ರಿ ಕೊಲೆಗೈದಿದ್ದಾನೆ.
ಕೊಲೆಯಾದ ಸುಂದರ ಅವಿವಾಹಿತನಾಗಿದ್ದು, ಮೂಲ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ. ಈತನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಆರೋಪಿ ಅಣ್ಣ ರವಿ ವಾಸವಾಗಿದ್ದು ಆತನ ಪತ್ನಿ ಜಯಂತಿಯೇ ಸುಂದರನಿಗೆ ದಿನಾಲೂ ಊಟ ತಿಂಡಿ ನೀಡುತ್ತಿದ್ದರು. ಈ ಮಧ್ಯೆ ಪತ್ನಿ ಜಯಂತಿ ಹಾಗೂ ತಮ್ಮ ಸುಂದರನಿಗೂ ಅನೈತಿಕ ಸಂಬಂಧ ಇತ್ತು ಎಂಬ ವಿಚಾರದಲ್ಲಿ ರವಿ ಹಾಗೂ ಸುಂದರ ಮಧ್ಯೆ ಪದೇ ಪದೇ ಬಾಯಿ ಮಾತಿನ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಶುಕ್ರವಾರ ರಾತ್ರಿ ಊಟ ಮಾಡಿ ಮನೆಯಲ್ಲಿದ್ದ ಸಮಯ ಅಣ್ಣ ರವಿ ಹಾಗೂ ತಮ್ಮ ಸುಂದರನಿಗೆ ಮೂಲ ಮನೆಯಲ್ಲಿ ಗಲಾಟೆಯಾಗಿದೆ. ರಾತ್ರಿ ಸುಮಾರು 11.30 ರ ವೇಳೆಗೆ ಸುಂದರನ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಸುಂದರನ ಮತ್ತೋರ್ವ ಅಣ್ಣ ರಮೇಶ ನೋಡಿದಾಗ ಅಣ್ಣ ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ಸುಂದರನ ತಲೆಗೆ ಬಡೆಯುತ್ತಿದ್ದು, ಸುಂದರ ನೆಲಕ್ಕ ಕುಸಿದು ಬಿದ್ದು ನರಳಾಡುತ್ತಿದ್ದ.
ಅದೇ ವೇಳೆ ಅತ್ತಿಗೆ ಹೇಮಲತಾ, ಅಣ್ಣ ಸುರೇಶ ಕೂಡ ಸ್ಥಳಕ್ಕೆ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಸುಂದರನ್ನು ಆರೈಕೆ ಮಾಡುತ್ತಿದ್ದಂತೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಆರೋಪಿ ಅಣ್ಣ ರವಿ ಸಲಾಕೆ ಬಿಸಾಡಿ ಸ್ಥಳದಿಂದ ಓಡಿ ಹೋಗಿದ್ದಾನೆ.
ಅತ್ತಿಗೆ ಜಯಂತಿಯೊಂದಿಗೆ ತಮ್ಮ ಸುಂದರನು ಅನೈತಿಕ ಸಂಬಂಧ ಇರುವ ಬಗ್ಗೆ ಶಂಕಿಸಿ ಅಣ್ಣ ರವಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2021 ಕಲಂ 302 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment