ದುಬೈ, ಸೆಪ್ಟೆಂಬರ್ 22, 2021 (ಕರಾವಳಿ ಟೈಮ್ಸ್) : ಕಾರ್ತಿಕ್ ತ್ಯಾಗಿಯ ಚಾಣಾಕ್ಷತೆಯಿಂದ ಕೂಡಿದ ಅಂತಿಮ ಓವರಿನ ಅಮೋಘ ಪ್ರದರ್ಶನದಿಂದಾಗಿ ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ 2021 ರ ಐಪಿಎಲ್ ಕೂಟದ 32ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ರೋಚಕ 2 ರನ್ ಗಳಿಂದ ಪರಾಭವಗೊಳಿಸಿದ ರಾಜಸ್ಥಾನ ರಾಯಲ್ಸ್ ತಂಡ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು. ಕೊ
ಕೊನೆಯವರೆಗೂ ಪಂದ್ಯ ಸಂಪೂರ್ಣವಾಗಿ ಪಂಜಾಬ್ ಕೈಯಲ್ಲೇ ಇತ್ತು. ಇನ್ನೇನು ಗೆದ್ದು ಬೀಗಿದೆವು ಎಂಬಂತಿದ್ದ ಪಂದ್ಯದ ಕೊನೆಯ ಎರಡು ಓವರ್ ಹೈಡ್ರಾಮಾವನ್ನೇ ಸೃಷ್ಟಿಸಿ ಹಾಕಿತು. 19ನೇ ಓವರಿನಲ್ಲಿ ಕೇವಲ 4 ರನ್ ಮಾತ್ರ ಬಂದ ಹಿನ್ನೆಲೆಯಲ್ಲಿ ಕೊನೆಯ ಓವರಿನಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 4 ರನ್‍ಗಳ ಅವಶ್ಯಕತೆ ಇತ್ತು. ಕಾರ್ತಿಕ್ ತ್ಯಾಗಿ ಎಸೆದ ಪಂದ್ಯದ ಕೊನೆಯ ಓವರಿನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತದಲ್ಲಿ ಏಡನ್ ಮಾಕ್ರಮ್ 1 ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಪೂರನ್ ಅವರು ವಿಕೆಟ್ ಕೀಪರ್ ಸ್ಯಾಮ್ಸನ್ ಕೈಗೆ ಕ್ಯಾಚ್ ನೀಡಿ ಹೊರ ನಡೆದ ಬಳಿಕ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿತು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ ದೀಪಕ್ ಹೂಡ ಮತ್ತೆ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು. ಕೊನೆಯ ಎಸೆತದಲ್ಲಿ ಪಂಜಾಬ್ ವಿಜಯಕ್ಕೆ ಮೂರು ರನ್ ಅವಶ್ಯಕತೆ ಇತ್ತು, ಸ್ಟ್ರೈಕ್ ಭಾಗದಲ್ಲಿದ್ದ ಎಲೆನ್ ಯಾವುದೇ ರನ್ ತೆಗೆಯಲು ಸಫಲರಾಗದೆ ಅಂತಿಮ ಎಸೆತದಲ್ಲಿ ಪಂಜಾಬ್ ಪಂದ್ಯವನ್ನು ಎದುರಾಳಿ ರಾಜಸ್ಥಾನ ತಂಡಕ್ಕೆ ಒಪ್ಪಿಸಿತು.
ಗೆಲ್ಲಲು 186 ರನ್‍ಗಳ ಗುರಿಯನ್ನು ಪಡೆದಿದ್ದ ಪಂಜಾಬ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಮಾತ್ರ ಗಳಿಸಲು ಶಕ್ತವಾಗಿ 2 ರನ್ ಗಳ ವಿರೋಚಿತ ಸೋಲನುಭವಿಸಿತು.
ಪಂಜಾಬ್ ಪರ ನಾಯಕ ಕೆ ಎಲ್ ರಾಹುಲ್ ಮತ್ತು ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 120 ರನ್ ಜೊತೆಯಾಟವಾಡಿದರು. ರಾಹುಲ್ 49 ರನ್ (33 ಎಸೆತ, 4 ಬೌಂಡರಿ, 6 ಸಿಕ್ಸರ್), ಮಯಾಂಕ್ 67 ರನ್ (43 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಏಡನ್ ಮಾಕ್ರಮ್ ಮತ್ತು ನಿಕೂಲಸ್ ಪೂರನ್ ಮೂರನೇ ವಿಕೆಟಿಗೆ 39 ಎಸೆತಗಳಲ್ಲಿ 57 ರನ್ ಭಾರಿಸಿದರು. ಪೂರನ್ 32 ರನ್ (1 ಬೌಂಡರಿ, 2 ಸಿಕ್ಸರ್) ಹೊಡೆದರೆ ಮಾಕ್ರಮ್ ಔಟಾಗದೇ 26 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸರ್) ಭಾರಿಸಿದರು.
ಉತ್ತಮ ಬೌಲಿಂಗ್ ಮಾಡಿದ ಕಾರ್ತಿಕ್ ತ್ಯಾಗಿ 4 ಓವರ್ ಎಸೆದು 29 ರನ್ ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಪಂದ್ಯದ ಜಯದೊಂದಿಗೆ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 8 ಅಂಕ ಪಡೆದು 5ನೇ ಸ್ಥಾನಕ್ಕೇರಿದೆ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಎವಿನ್ ಲೂಯಿಸ್ 36 ರನ್ (21 ಎಸೆತ, 7 ಬೌಂಡರಿ, 1 ಸಿಕ್ಸರ್) ಯಶಸ್ವಿ ಜೈಸ್ವಾಲ್ 49 ರನ್ (36 ಎಸೆತ, 6 ಬೌಂಡರಿ, 2 ಸಿಕ್ಸರ್) ಮಹಿಪಾಲ್ 43 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು.
ಪಂಜಾಬ್ ಪರ ಅರ್ಶ್‍ದೀಪ್ ಸಿಂಗ್ 4 ಓವರ್ ಎಸೆದು 32 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ 1, ಹರ್ಪಿತ್ ಬ್ರಾರ್ 1 ವಿಕೆಟ್ ಪಡೆದರು.
 
 







 
 
 
 


 



 




0 comments:
Post a Comment