ಬಂಟ್ವಾಳ, ಸೆಪ್ಟೆಂಬರ್ 04, 2021 (ಕರಾವಳಿ ಟೈಮ್ಸ್) : ಅಪಘಾತದ ಗಾಯಾಳು, ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವು ಜನಗೊಂಡ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ವೇಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಸೊಂಟ ಹಾಗೂ ಹೊಟ್ಟೆಯ ಭಾಗಗಳಿಗೆ ಸಣ್ಣ-ಪುಟ್ಟ ಗಾಯಗೊಂಡಿದ್ದರು. ಗಾಯದ ತೀವ್ರತೆ ಅರಿವಿಗೆ ಬಾರದೆ ಅವರು ಚಿಕಿತ್ಸೆಗೆ ದಾಖಲಾಗುವ ಬಗ್ಗೆ ತಡವಾಗಿಸಿದ್ದರು ಎನ್ನಲಾಗಿದೆ. ಶುಕ್ರವಾರ ಇವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ತುಂಬೆ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ ಫಲಕಾರಿಯಾಗದೆ ಶುಕ್ರವಾರ ರಾತ್ರಿ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಬೆಳಗಾವಿಯ ಅಥಣಿ ನಿವಾಸಿಯಾಗಿದ್ದ ಶಿವು ಅವಿವಾಹಿತರಾಗಿದ್ದು, ಕೈಕುಂಜೆಯಲ್ಲಿ ವಾಸವಾಗಿದ್ದರು. ಇವರು ಸರಕಾರಿ ಕೆಲಸದ ನಡುವೆಯೂ ಮಾನವೀಯ ಹೃದಯ ವೈಶಾಲ್ಯತೆ ಬೆಳೆಸಿಕೊಂಡು ಬಡವರ ಪರವಾಗಿ ಹಲವು ಜನಪರ ಕೆಲಸಗಳನ್ನು ಕೈಗೊಂಡು ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
0 comments:
Post a Comment