ಬಂಟ್ವಾಳ, ಅಕ್ಟೋಬರ್ 09, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಶುಕ್ರವಾರ ನಡೆದ ಶಾಲಾ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜನಾಕ್ರೋಶ ಭುಗಿಲೆದ್ದ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ಪೊಲೀಸರು ಆರೋಪಿಗಳಾದ ಕಾಪು ನಿವಾಸಿ ಕೆ ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಇದಾಯತ್ತುಲ್ಲ ಅವರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ರಾಪ್ತೆಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೊನಾವಣೆ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಪ್ರವೃತ್ತರಾಗಿ ಆರೋಪಿಗಳ ಜಾಡನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಮುಖ ಆರೋಪಿ ಕೆ ಎಸ್ ಶರತ್ ಶೆಟ್ಟಿ ಬಾಲಕಿ ಜೊತೆ ಫೇಸ್‍ಬುಕ್ ಪರಿಚಯ ಮಾಡಿಕೊಂಡು ಮೊಬೈಲ್ ಮೂಲಕ ಮಾತನಾಡಿ ಬಳಿಕ ಬಾಲಕಿಯನ್ನು ತನ್ನ ಸಂಬಂಧಿ ಮಾರುತಿ ಮಂಜುನಾಥ್ ಎಂಬಾತನಿಗೂ ಪರಿಚಯ ಮಾಡಿಸಿದ್ದಾನೆ. ಆರೋಪಿ ಮಂಜುನಾಥ್ ಬಾಲಕಿಯೊಂದಿಗೆ ಸಲುಗೆಯಿಂದ ಇದ್ದು, ವಾಟ್ಸ್‍ಆಪ್ ಮೂಲಕ ಅಶ್ಲೀಲ ವಿಡಿಯೋ ಚಾಟ್ ಮಾಡಿಕೊಂಡಿದ್ದ.
ಅಕ್ಟೋಬರ್ 8 ರಂದು ಆರೋಪಿ ಶರತ್ ಶೆಟ್ಟಿ ಬಾಲಕಿಯನ್ನು ಮಂಗಳೂರಿಗೆ ಬರುವಂತೆ ತಿಳಿಸಿದ್ದು, ಆ ಪ್ರಕಾರ ಸಂತ್ರಸ್ತ ಬಾಲಕಿ ಬಸ್ಸಿನಲ್ಲಿ ಮಂಗಳೂರಿಗೆ ತೆರಳಿ ಸಿಟಿ ಮಹಲ್ ಬಳಿ ಆರೋಪಿ ಶರತ್ ಶೆಟ್ಟಿಯನ್ನು ಭೇಟಿಯಾಗಿದ್ದಾಳೆ. ಬಳಿಕ ಆತ ಬಾಲಕಿಯನ್ನು ಲಾಡ್ಜಿನಲ್ಲಿ ವಿಶ್ರಾಂತಿ ಮಾಡೋಣ ಎಂದು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದು ಕೊಂಡು ಹೋಗಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಲ್ಲದೆ ತನ್ನ ಸ್ನೇಹಿತ ಇದಾಯತ್ತುಲ್ಲ ನಿಗೂ ಕರೆ ಮಾಡಿ ಹುಡುಗಿ ಇದ್ದು, ಲಾಡ್ಜಿಗೆ ಬರುವಂತೆ ತಿಳಿಸಿದ ಪ್ರಕಾರ ಆರೋಪಿ ಇದಾಯತ್ತುಲ್ಲ ಕೂಡಾ ಲಾಡ್ಜಿಗೆ ಬಂದು ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುತ್ತಾನೆ.
ಆರೋಪಿ ಸತೀಶ್ ಅತ್ಯಾಚಾರ ಎಸಗಲು ಲಾಡ್ಜ್ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಬಾಲಕಿ ತಂಗಿದ್ದ ಕೋಣೆಗೆ ತೆರಳಿ ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಶೋಷಣೆ ಮಾಡಿರುತ್ತಾನೆ. ಘಟನೆಯ ಬಳಿಕ ಸಂತ್ರಸ್ತೆ ಬಸ್ ಮೂಲಕ ಬಂಟ್ವಾಳಕ್ಕೆ ಬಂದಿದ್ದಾಳೆ. ಬಳಿಕ ಈ ಬಗ್ಗೆ ಬಾಲಕಿ ನೀಡಿರುವ ಹೇಳಿಕೆಯಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2021 ಕಲಂ 366 (ಎ), 376(ಡಿ), 506 ಐಪಿಸಿ ಮತ್ತು ಕಲಂ 04, 06 ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕಸ್ಟಡಿಯಲ್ಲಿರಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment