ದುಬೈ, ಅಕ್ಟೋಬರ್ 10, 2021 (ಕರಾವಳಿ ಟೈಮ್ಸ್) : ಏಳು-ಬೀಳು ಕಂಡ ಐಪಿಎಲ್-2021 ಕೂಟದ ದುಬೈ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನಾಯಕ ಎಂ.ಎಸ್. ಧೋನಿ ಅವರ ಮನಮೋಹ ಫಿನಿಶಿಂಗ್ ಮೂಲಕ ಡೆಲ್ಲಿ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ 9ನೇ ಬಾರಿಗೆ ಐಪಿಎಲ್ ಕೂಟದ ಫೈನಲಿಗೇರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ಹಾಗೂ ನಾಯಕ ರಿಷಬ್ ಪಂತ್ ಅವರ ಅರ್ಧ ಶತಕಗಳ ನೆರವಿನಿಂದ 172 ರನ್ ಗಳನ್ನು ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 173 ರನ್ ಗುರಿ ನಿಗದಿಪಡಿಸಿತು.
ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲೇ 3 ರನ್ ಗಳಿಸುವಷ್ಟರಲ್ಲಿ 1 ರನ್ ಗಳಿಸಿದ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ರುತುರಾಜ್ ಗಾಯಕ್ವಾಡ್ ಹಾಗೂ ರಾಬಿನ್ ಉತ್ತಪ್ಪ ಸೇರಿಕೊಂಡು 2ನೇ ವಿಕೆಟ್ 110 ರನ್ ಗಳ ಉತ್ತಮ ಭಾಗೀದಾರಿಕೆ ಕಟ್ಟಿದರು. 35 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿದ ರಾಬಿನ್ ಉತ್ತಪ್ಪ 44 ಎಸೆತದಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 63 ರನ್ ಸಿಡಿಸಿ ಔಟಾದರು. ಬಳಿಕ ರುತುರಾಜ್ ಗಾಯಕ್ವಾಡ್ 37 ಎಸೆತದಲ್ಲಿ ಅರ್ಧ ಶತಕ ಭಾರಿಸಿ ತಂಡಕ್ಕೆ ನೆರವಾದರು.
ಶಾರ್ದೂಲ್ ಠಾಕೂರ್ ಡಕೌಟ್ ಆದರು. ಅಂಬಾಟಿ ರಾಯುಡು 1 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಕೊನೆಯ 4 ಓವರ್ ಗಳಲ್ಲಿ ಚೆನ್ನೈ ತಂಡಕ್ಕೆ ಗೆಲ್ಲಲು 44 ರನ್ ಗಳ ಅವಶ್ಯಕತೆ ಇತ್ತು. ರುತುರಾಜ್ ಹಾಗೂ ಮೊಯಿನ್ ಆಲಿ ದಿಟ್ಟ ಹೋರಾಟ ಸಂಘಟಿಸಿದರು. ಆದರೆ ಕೊನೆ ಹಂತಕ್ಕೆ ಪಂದ್ಯ ಬರುತ್ತಿದ್ದಂತೆ 70 ರನ್ ಸಿಡಿಸಿದ್ದ ರುತುರಾಜ್ ಗಾಯಕ್ವಾಡ್ ಔಟಾದರು. ಪಂದ್ಯ ಮತ್ತೆ ರೋಮಾಂಚಕ ಹಂತಕ್ಕೆ ತಲುಪಿತು. ಮೊಯಿನ್ ಆಲಿ ಜೊತೆ ಸೇರಿಕೊಂಡ ನಾಯಕ ಎಂ.ಎಸ್. ಧೋನಿ ಪಂದ್ಯದ ಜವಾಬ್ದಾರಿ ವಹಿಸಿಕೊಂಡರು.
ಚೆನ್ನೈ ಜಯಕ್ಕೆ ಅಂತಿಮ 10 ಎಸೆತದಲ್ಲಿ 20 ರನ್ ಅವಶ್ಯಕತೆ ಇತ್ತು. ಈ ಸಂದರ್ಭ ಧೋನಿ ಬ್ಯಾಟಿನಿಂದ ಭರ್ಜರಿ ಸಿಕ್ಸರ್ ಸಿಡಿಯಿತು. ಕೊನೆಯ 6 ಎಸೆತಗಳಲ್ಲಿ 13 ರನ್ ಅವಶ್ಯತೆ ಇದ್ದಾಗ ಮೊಯಿನ್ ಆಲಿ ಔಟಾದರು. ಬಳಿಕ ಕೆಚ್ಚೆದೆಯ ಹೋರಾಟ ಸಂಘಟಿಸಿದ ಧೋನಿ ಸತತ 3 ಬೌಂಡರಿ ಸಿಡಿಸಿ ತಂಡಕ್ಕೆ 4 ವಿಕೆಟ್ ಗಳ ರೋಚಕ ಗೆಲುವು ತಂದುಕೊಟ್ಟರು.
ನಾಯಕ ಧೋನಿ ಅವರ ಮ್ಯಾಚ್ ಫಿನಿಶಿಂಗ್ ಸಾಮರ್ಥ್ಯ ಮತ್ತೊಮ್ಮೆ ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು. ಧೋನಿ ಕೇವಲ 6 ಎಸೆತ ಎದುರಿಸಿ 18 ರನ್ ಸಿಡಿಸಿದರು. ಈ ಜಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೇರವಾಗಿ ಫೈನಲ್ ಹಂತಕ್ಕೆ ತೇರ್ಗಡೆ ಹೊಂದಿತು. ಐಪಿಎಲ್ ಇತಿಹಾಸದಲ್ಲಿ ಚೆನ್ನೈ 9ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದಂತಾಗಿದೆ.
0 comments:
Post a Comment