ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ನೋಂದಣಿ ಕೊನೆ ದಿನಾಂಕ ವಿಸ್ತರಿಸಿ ಪರೀಕ್ಷಾ ಮಂಡಳಿ ಅಧಿಸೂಚನೆ : ಮೇ ತಿಂಗಳಲ್ಲಿ ಪರೀಕ್ಷೆ ಸಾಧ್ಯತೆ - Karavali Times ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ನೋಂದಣಿ ಕೊನೆ ದಿನಾಂಕ ವಿಸ್ತರಿಸಿ ಪರೀಕ್ಷಾ ಮಂಡಳಿ ಅಧಿಸೂಚನೆ : ಮೇ ತಿಂಗಳಲ್ಲಿ ಪರೀಕ್ಷೆ ಸಾಧ್ಯತೆ - Karavali Times

728x90

25 December 2021

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ನೋಂದಣಿ ಕೊನೆ ದಿನಾಂಕ ವಿಸ್ತರಿಸಿ ಪರೀಕ್ಷಾ ಮಂಡಳಿ ಅಧಿಸೂಚನೆ : ಮೇ ತಿಂಗಳಲ್ಲಿ ಪರೀಕ್ಷೆ ಸಾಧ್ಯತೆ

ಬೆಂಗಳೂರು, ಡಿಸೆಂಬರ್ 25, 2021 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಗೆ ಈ ಹಿಂದೆ ಇದ್ದ ಡಿ 27 ರ ಕೊನೆ ದಿನಾಂಕವನ್ನು 2022 ರ ಜನವರಿ 10ರವರೆಗೆ ವಿಸ್ತರಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಪ್ರಕಟಿಸಿದೆ. ಕ್ರಿಸ್ಮಸ್ ಹಬ್ಬ ಹಾಗೂ ಹಲವು ಶಾಲಾ ವಿದ್ಯಾರ್ಥಿಗಳು ನೋಂದಣಿ ಪ್ರಕ್ರಿಯೆ ಇನ್ನೂ ಮುಗಿಸದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ದಿನಾಂಕ ಮುಂದೂಡಿ ಈ ಅಧಿಸೂಚನೆ ಹೊರಡಿಸಿದೆ.

2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೋಂದಣಿ, ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆ ದಿನಾಂಕವನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‍ತಾಣಕ್ಕೆ ಭೇಟಿ ನೀಡಬಹುದಾಗಿದೆ. 

ವಿದ್ಯಾರ್ಥಿಗಳ ಮಾಹಿತಿಯನ್ನು ಮಂಡಳಿ ವೆಬ್‍ಸೈಟ್ ನಲ್ಲಿ ನೋಂದಣಿ ಮಾಡಲು ಜನವರಿ 10 ಕೊನೆಯ ದಿನವಾಗಿದೆ. ಜನವರಿ 17 ಪರೀಕ್ಷಾ ಶುಲ್ಕ ಚಲನ್ ಮುದ್ರಿಸಿಕೊಳ್ಳಲು ಕೊನೆ ದಿನಾಂಕವಾಗಿದ್ದು, ಜನವರಿ 19 ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ. 

ಈ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳು ಹಳೆಯ ಪದ್ದತಿಯಂತೆ ಜನವರಿ 19ರೊಳಗೆ ಪರೀಕ್ಷಾ ಶುಲ್ಕವನ್ನು ಸೂಚಿಸಿರುವ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಪಾವತಿ ಮಾಡಿ ಅದನ್ನು ಮಂಡಳಿಗೆ ಸಲ್ಲಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅರ್ಹರಾಗುವುದಿಲ್ಲ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹಳೇ ಪದ್ದತಿಯಂತೆ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಪತ್ರಿಕೆ ನೀಡಿ ಬಹು ಆಯ್ಕೆ ಮಾದರಿ ಪರೀಕ್ಷೆ ಮಾಡಲಾಗಿತ್ತು. ಕೇವಲ ಎರಡೇ ದಿನದಲ್ಲಿ ಪರೀಕ್ಷೆ ಮುಕ್ತಾಯಗೊಳಿಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಯಾವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ಷರತ್ತಿನ ಮೇರೆಗೆ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. 

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಹಿಂದೆ ಇದ್ದಂತೆ ಬಹು ಆಯ್ಕೆ ಪ್ರಶ್ನೆ ಒಳಗೊಂಡಂತೆ ಅರು ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಗೆ 100 ಅಂಕ, ಉಳಿದ ಐದು ವಿಷಯಗಳಿಗೆ ತಲಾ 80 ಅಂಕ ಇರಲಿದೆ. ಉಳಿದ 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು ಆರು ವಿಷಯಗಳಿಗೆ ಪರೀಕ್ಷೆ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷ ತಡವಾಗಿ ಅರಂಭವಾಗಿತ್ತು. ಪಠ್ಯ ಕ್ರಮದಲ್ಲಿ ಕೆಲವು ಅಧ್ಯಾಯ ಕಡಿತ ಮಾಡಿದ್ದು, ಉಳಿದ ಪಠ್ಯಕ್ರಮ ಆಧರಿಸಿ ಲಿಖಿತ ಪರೀಕ್ಷೆ ನಡೆಯಲಿದೆ.

ಸದ್ಯ ಈ ಬಾರಿಯೂ ಓಮಿಕ್ರಾನ್ ಹೆಚ್ಚುತ್ತಿರುವ ಭೀತಿ ಕಾಡುತ್ತಿದ್ದು, ಈ ಬಗ್ಗೆ ಅವಲೋಕನ ಮಾಡಿ ಫೆಬ್ರವರಿ- ಮಾರ್ಚ್ ತಿಂಗಳ ಪರಿಸ್ಥಿತಿ ನೋಡಿಕೊಂಡು ಪರೀಕ್ಷಾ ದಿನಾಂಕ ನಿಗದಿ ಪಡಿಸಲು ಚಿಂತನೆ ನಡೆದಿದೆ. ಆದರೂ ಮೇ ತಿಂಗಳಲ್ಲಿ ಪರಿಕ್ಷೆ ನಿಗದಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನುಸರಿಸಿದ್ದರಿಂದ ಹೊರೆಯಾದ ವೆಚ್ಚ ಸರಿದೂಗಿಸಲು ಹಾಗೂ ಪರೀಕ್ಷಾ ಪ್ರಕ್ರಿಯೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕವನ್ನು 100 ರೂಪಾಯಿ ಹೆಚ್ಚಿಸಿ ಶಿಕ್ಷಣ ಇಲಾಖೆ ದೇಶ ಹೊರಡಿಸಿದೆ. ಪರಿಣಾಮ ಶುಲ್ಕ 485 ರೂಪಾಯಿ ಇದ್ದುದು 585 ರೂಪಾಯಿಗೆ ಏರಿಕೆಯಾಗಿದೆ. ಪುನರಾವರ್ತಿತ ಶಾಲಾ, ಖಾಸಗಿ ಅಭ್ಯರ್ಥಿಗಳು ಒಂದು ವಿಷಯಕ್ಕೆ ಕಟ್ಟಬೇಕಿದ್ದ ಶುಲ್ಕವನ್ನು 320 ರಿಂದ 370 ಕ್ಕೆ ಹೆಚ್ಚಳ ಮಾಡಲಾಗಿದೆ. 2 ವಿಷಯಕ್ಕೆ 386 ರೂಪಾಯಿ ಪಾವತಿಸಬೇಕಿದ್ದ ವಿದ್ಯಾರ್ಥಿಗಳು 461 ರೂಪಾಯಿ ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 520 ರೂಪಾಯಿ ಇದ್ದುದು 620 ರೂಪಾಯಿಗೆ ಏರಿಸಲಾಗಿದೆ.   • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ನೋಂದಣಿ ಕೊನೆ ದಿನಾಂಕ ವಿಸ್ತರಿಸಿ ಪರೀಕ್ಷಾ ಮಂಡಳಿ ಅಧಿಸೂಚನೆ : ಮೇ ತಿಂಗಳಲ್ಲಿ ಪರೀಕ್ಷೆ ಸಾಧ್ಯತೆ Rating: 5 Reviewed By: karavali Times
Scroll to Top