ಬೆಂಗಳೂರು, ಜನವರಿ 04, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ತುರ್ತು ಸಭೆ ರಾತ್ರಿ ವೇಳೆಗೆ ಮುಕ್ತಾಯ ಕಂಡಿದ್ದು, ಜನವರಿ 6 ರಿಂದ ಮುಂದಿನ ಎರಡು ವಾರ ಕಾಲ ಕಠಿಣ ನಿಮಯಗಳನ್ನು ಜಾರಿಗೊಳಿಸಿ ಸಭೆ ನಿರ್ಣಯಿಸಿದ್ದು, ನೂತನ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಜನವರಿ 6 ರಿಂದ ಮುಂದಿನ ಎರಡು ವಾರ ವಾರಾಂತ್ಯ ನಿಷೇಧಾಜ್ಞೆ ಇರಲಿದ್ದು, ಜೊತೆಗೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ನಿರ್ಬಂಧ ವಿಧಿಸಲಾಗಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಅಗತ್ಯ ಸೇವೆ ಹೊರತುಪಡಿಸಿ ರಾಜ್ಯ ಸಂಪೂರ್ಣ ಲಾಕ್ ಆಗಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಸೀಮಿತಗೊಂಡಂತೆ ಮುಂದಿನ ಎರಡು ವಾರ ಶಾಲಾ-ಕಾಲೇಜು ಬಂದ್ ಮಾಡಲಾಗಿದೆ. ಆದರೆ 10, 11 ಮತ್ತು 12ನೇ ತರಗತಿಗಳು, ಮೆಡಿಕಲ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳು ಎಂದಿನಂತೆ ನಡೆಯಲಿದ್ದು, ಉಳಿದಂತೆ ಎಲ್ಲಾ ತರಗತಿಗಳು ಆನ್ ಲೈನ್ ಮೂಲಕ ಮುಂದುವರಿಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಚಿತ್ರಮಂದಿರ, ಬಾರ್ ಅಂಡ್ ರೆಸ್ಟೋರೆಂಟ್, ಪಬ್, ಕ್ಲಬ್ ಮತ್ತು ಹೋಟೆಲ್ ಗಳಲ್ಲಿ ಶೇಕಡ 50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರಾಂಗಣ ಮದುವೆಗಳಿಗೆ 200 ಮಂದಿಗೆ ಅವಕಾಶ ನೀಡಲಾಗುತ್ತಿದ್ದು, ಒಳಾಂಗಣ ಮದುವೆಗಳಿಗೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗೋವಾ, ಮಹಾರಾಷ್ಟ್ರ, ಕೇರಳದಿಂದ ಬರುವವರು ಕಡ್ಡಾಯವಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ ಎಂದಿನಂತೆ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಆದರೆ ಏಕಕಾಲಕ್ಕೆ 50 ಮಂದಿ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿಭಟನೆ, ರ್ಯಾಲಿ, ಧರಣಿ ಮತ್ತು ಜಾತ್ರೆಗಳಿಗೆ ಬ್ರೇಕ್ ಹಾಕಲಾಗಿದೆ. ಎಲ್ಲಾ ಸಾರ್ವಜನಿಕ ಪಾರ್ಕ್ ಗಳನ್ನು ಬಂದ್ ಮಾಡಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
0 comments:
Post a Comment