ಮಂಗಳೂರು, ಜನವರಿ 25, 2022 (ಕರಾವಳಿ ಟೈಮ್ಸ್) : ಉಳ್ಳಾಲ ದೇವಾಲಯವೊಂದರಲ್ಲಿ ಜನವರಿ 26 ರಿಂದ ಎರಡು ದಿನಗಳ ಕಾಲ ನಡೆಯಲಿರುವ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂಬ ಒಕ್ಕಣೆ ಒರುವ ಬ್ಯಾನರನ್ನು ಪೊಲೀಸರು ಮಂಗಳವಾರ ತೆರವುಗೊಳಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಬಜರಂಗದಳ ಉಳ್ಳಾಲ ಬೈಲ್ ಎಂಬ ಹೆಸರಿನಡಿ ಇಲ್ಲಿನ ಮೈದಾನದಲ್ಲಿ ಈ ವಿವಾದಿತ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಮಾಜದ ಶಾಂತಿಗೆ ಧಕ್ಕೆ ತರುವ ಆತಂಕ ವ್ಯಕ್ತಪಡಿಸಲಾಗಿತ್ತು.
ಈ ನೆಲದ ದೈವ-ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದು ಬ್ಯಾನರಿನಲ್ಲಿ ಬರೆಯಲಾಗಿತ್ತು.
ಈ ಬಗ್ಗೆ ಪ್ರತಿಕ್ರಯಿಸಿದ ಕ್ಷೇತ್ರದ ಶಾಸಕ ಯು ಟಿ ಖಾದರ್, ಫೆÇೀಸ್ಟರ್ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ದ ಪೊಲೀಸರು ಸ್ವಯಂಘೋಷಿತ ಪ್ರಕರಣ ದಾಖಲಿಸಬೇಕು ಎಂದರು. ವಿವಾದಾತ್ಮಕ ಪೋಸ್ಟರಿನಿಂದ ಅಂತರ ಕಾಪಾಡಿಕೊಳ್ಳುವಂತೆ ದೇವಾಲಯ ಸಮಿತಿಯೊಂದಿಗೆ ಮಾತುಕತೆ ನಡೆಸಿರುವುದಾಗಿ ಖಾದರ್ ಹೇಳಿದರು.
ಪ್ರತಿವರ್ಷ ಉಳ್ಳಾಲ ಜಾತ್ರೆ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಜನರು ಅಂಗಡಿಗಳನ್ನು ಹಾಕುತ್ತಾರೆ. ಇದೀಗ ಕೆಲ ದುಷ್ಕರ್ಮಿಗಳು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಖಾದರ್ ವಿಷಾದ ವ್ಯಕ್ತಪಡಿಸಿದ್ದಾರೆ.









0 comments:
Post a Comment