ಪುತ್ತೂರು : ಉದ್ಯಮಿಗೆ ಬೆದರಿಸಿ ಹಣ ವಸೂಲಿ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಗ್ರಾಮಾಂತರ ಪೊಲೀಸರು - Karavali Times ಪುತ್ತೂರು : ಉದ್ಯಮಿಗೆ ಬೆದರಿಸಿ ಹಣ ವಸೂಲಿ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಗ್ರಾಮಾಂತರ ಪೊಲೀಸರು - Karavali Times

728x90

15 January 2022

ಪುತ್ತೂರು : ಉದ್ಯಮಿಗೆ ಬೆದರಿಸಿ ಹಣ ವಸೂಲಿ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಗ್ರಾಮಾಂತರ ಪೊಲೀಸರು

ಪುತ್ತೂರು, ಜನವರಿ 15, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಉದ್ಯಮಿಗೆ ಮೊಬೈಲ್ ಮೂಲಕ ಬೆದರಿಕೆ ಕರೆ ಮಾಡಿ ಹಣ ವಸೂಲು ಮಾಡಲು ಯತ್ನಿಸಿದ್ದ ಇಬ್ಬರು ರೌಡಿ ಶೀಟರುಗಳನ್ನು ಪೊಲೀಸರು ಹೆಡೆಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕು, ಗೋಳ್ತಮಜಲು ಗ್ರಾಮದ ಕಲ್ಲಡ್ಕ ಮಸೀದಿ ಬಳಿ ನಿವಾಸಿ ಅಬ್ದುಲ್ಲಾ ಅವರ ಪುತ್ರ ಕಲಂದರ್ ಶರೀಫ್ ಯಾನೆ ಶಾಫಿ ಹಾಗೂ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಕುಚ್ಚಿಗಡ್ಡೆ ನಿವಾಸಿ ಹಂಝ ಅವರ ಪುತ್ರ ಹಸನಬ್ಬ ಅಲಿಯಾಸ್ ಹಸನ್ ಅಲಿಯಾಸ್ ಅಚ್ಚು ಅಲಿಯಾಸ್ ಅಚುನ್ ಎಂದು ಹೆಸರಿಸಲಾಗಿದೆ. 

ಆರೋಪಿಗಳು ಪುತ್ತೂರಿನ ಉದ್ಯಮಿಯೊಬ್ಬರಿಗೆ ವಿವಿಧ ಮೊಬೈಲ್ ಗಳ ಮೂಲಕ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ. ಆತನನ್ನು ಬಿಡಿಸಲು 13 ಲಕ್ಷ ರೂಪಾಯಿ ಹಣ ಬೇಕಾಗಿದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು. 2 ದಿನಗಳೊಳಗೆ 3.5 ಲಕ್ಷ ರೂಪಾಯಿ ಹಣ ರೆಡಿ ಮಾಡಬೇಕು. ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇವೆ. ಈ ವಿಚಾರವನ್ನು ಇತರರಿಗೆ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ. ನೀನು ಜೀವಂತ ಬದುಕಲು ಸಾಧ್ಯವಿಲ್ಲ ಎಂಬಿತ್ಯಾದಿ ಬೆದರಿಕೆ ಕರೆ ಮಾಡಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2022 ಕಲಂ 504, 506, 507, 387 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸರು ಶುಕ್ರವಾರ ಉದ್ಯಮಿಯ ಕೈಯಿಂದ ಆರೋಪಿಗಳು ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಕಲಂದರ್ ಶರೀಫ್ ಬಂಟ್ವಾಳ ನಗರ ಠಾಣಾ ರೌಡಿಶೀಟರ್ ಆಗಿದ್ದರೆ, ಆರೋಪಿ ಹಸನಬ್ಬ ಕೊಣಾಜೆ ಪೊಲೀಸ್ ಠಾಣಾ ರೌಡಿಶೀಟರ್ ಆಗಿದ್ದು, ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ದರೋಡೆ ಪ್ರಕರಣದ ಆರೋಪಿಯೂ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ ಭಗವಾನ್ ಹಾಗೂ ಪುತ್ತೂರು ಎಎಸ್ಪಿ ಡಾ ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪಿಎಸ್ಸೈಗಳಾದ ಉದಯ ರವಿ ಎಂ ವೈ, ಅಮೀನ್ ಸಾಬ್ ಎಂ ಅತ್ತಾರ್, ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ, ಅದ್ರಾಮ, ಪ್ರವೀಣ್ ರೈ, ಹರ್ಷಿತ್, ಗಾಯತ್ರಿ, ವಿನೋದ್, ಸಂಪತ್ ಹಾಗೂ ದಿವಾಕರ ಅವರು ಭಾಗವಹಿಸಿರುತ್ತಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಉದ್ಯಮಿಗೆ ಬೆದರಿಸಿ ಹಣ ವಸೂಲಿ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಗ್ರಾಮಾಂತರ ಪೊಲೀಸರು Rating: 5 Reviewed By: karavali Times
Scroll to Top