ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಚಂದ್ರಶೇಖರ ಪಾಟೀಲ್ (ಚಂಪಾ) ಇನ್ನಿಲ್ಲ .. - Karavali Times ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಚಂದ್ರಶೇಖರ ಪಾಟೀಲ್ (ಚಂಪಾ) ಇನ್ನಿಲ್ಲ .. - Karavali Times

728x90

9 January 2022

ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಚಂದ್ರಶೇಖರ ಪಾಟೀಲ್ (ಚಂಪಾ) ಇನ್ನಿಲ್ಲ ..

ಬೆಂಗಳೂರು, ಜನವರಿ 10, 2022 (ಕರಾವಳಿ ಟೈಮ್ಸ್) : ಕನ್ನಡದ ಹಿರಿಯ ಸಾಹಿತಿ, ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ, ಚಂಪಾ ಎಂಬ ಕಾವ್ಯನಾಮದಿಂದ ಪ್ರಸಿದ್ದರಾಗಿದ್ದ ಚಂದ್ರಶೇಖರ ಪಾಟೀಲ್ (83) ಅವರು ಸೋಮವಾರ (ಜ 10) ಮುಂಜಾನೆ ಬೆಂಗಳೂರಿನ ಕೋಣನಕುಂಟೆ ಆಸ್ಟ್ರಾ ಆಸ್ಪತ್ರೆಯಲ್ಲಿ ಅಸ್ತಂಗತರಾಗಿದ್ದಾರೆ. 

ಧಾರವಾಡದವರಾದ ಚಂಪಾ ಅವರು ಕೆಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವಿಮರ್ಶಾ ಕ್ಷೇತ್ರ, ನಾಟಕ ರಚನೆಯಲ್ಲಿ ಪ್ರಸಿದ್ಧರು. ಅವರು ರಚಿಸಿದ ನಾಟಕಗಳು ನಾಡಿನಲ್ಲಿ, ಹೊರನಾಡು ವಿದೇಶಗಳಲ್ಲಿಯೂ ಪ್ರದರ್ಶಿತವಾಗಿವೆ. ಅವರ ವಿಮರ್ಶೆಯೆಂದರೆ ಬಹು ಹರಿತ ಎಂದೇ ಖ್ಯಾತವಾಗಿತ್ತು.

ಸುದೀರ್ಘ ಅವಧಿ ಅವರು “ಸಂಕ್ರಮಣ” ಹೆಸರಿನ ಸಾಹಿತ್ಯ ಪತ್ರಿಕೆಯ ಸಂಪಾದಕರು-ಪ್ರಕಾಶಕರೂ ಆಗಿದ್ದರು. ಕನ್ನಡದ ಹಲವು ಸಾಹಿತಿಗಳನ್ನು ಗುರುತಿಸಿದ ಹೆಗ್ಗಳಿಕೆಯನ್ನು ಈ ಪತ್ರಿಕೆ ಹೊಂದಿದೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮೌಲಿಕ ಕೆಲಸಗಳನ್ನು ಮಾಡಿರುವ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. 2017ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಗೋಕಾಕ್ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಅವರು ಕನ್ನಡಕ್ಕೆ ಎಲ್ಲಿಯೇ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು. ನಾಡು-ನುಡಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಇವರ ಅಗಲಿಕೆ ಕನ್ನಡ ನಾಡಿಗೆ ಅಪಾರ ನಷ್ಟವನ್ನುಂಟು ಮಾಡಿದೆ. ಸರಕಾರಗಳ ಜನವಿರೋಧಿ ನೀತಿಯ ವಿರುದ್ಧ ತಮ್ಮ ಹರಿತವಾದ ಬರಹಗಳಿಂದಲೇ ಎಚ್ಚರಿಸಿ ಜನಪರವಾಗಿ ನಿಲ್ಲುತ್ತಿದ್ದ ಚಂಪಾ ಅವರು, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಚಂದ್ರಶೇಖರ್ ಪಾಟೀಲ್ 1939 ಜೂನ್ 18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ಬಸವರಾಜ ಹಿರೇಗೌಡರು ಹಾಗೂ ಮುರಿಗೆವ್ವ ದಂಪತಿಯ ಪುತ್ರರಾಗಿ ಜನಿಸಿದರು. ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನ ಸಂಕಲನಗಳು, ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು ಸೇರಿದಂತೆ ಅನೇಕ ಕೃತಿಗಳನ್ನ ರಚಿಸಿದ್ದಾರೆ.

ಚಂಪಾ ಅವರ ಕನ್ನಡ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಚಂದ್ರಶೇಖರ ಪಾಟೀಲ್ (ಚಂಪಾ) ಇನ್ನಿಲ್ಲ .. Rating: 5 Reviewed By: karavali Times
Scroll to Top