ವಿದ್ಯಾರ್ಥಿಗಳು ಕಾನೂನು ಮೀರಿ ವರ್ತಿಸಿ ಸುಂದರ ಭವಿಷ್ಯಕ್ಕೆ ಕಲ್ಲು ಹಾಕದಿರಿ : ಬಂಟ್ವಾಳ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಕರೆ  - Karavali Times ವಿದ್ಯಾರ್ಥಿಗಳು ಕಾನೂನು ಮೀರಿ ವರ್ತಿಸಿ ಸುಂದರ ಭವಿಷ್ಯಕ್ಕೆ ಕಲ್ಲು ಹಾಕದಿರಿ : ಬಂಟ್ವಾಳ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಕರೆ  - Karavali Times

728x90

14 February 2022

ವಿದ್ಯಾರ್ಥಿಗಳು ಕಾನೂನು ಮೀರಿ ವರ್ತಿಸಿ ಸುಂದರ ಭವಿಷ್ಯಕ್ಕೆ ಕಲ್ಲು ಹಾಕದಿರಿ : ಬಂಟ್ವಾಳ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಕರೆ 

 ಶ್ರೀರಾಮ್ ಫೈನಾನ್ಸ್ ವತಿಯಿಂದ 10 ಲಕ್ಷಕ್ಕೂ ಹೆಚ್ವಿನ ಸ್ಕಾಲರ್ ಶಿಪ್ ವಿತರಣೆ 


 

ಬಂಟ್ವಾಳ, ಫೆಬ್ರವರಿ 14, 2022 (ಕರಾವಳಿ ಟೈಮ್ಸ್) : ಕಾನೂನಿನ ಅರಿವು ಇದ್ದಾಗ ಸಮಾಜದಲ್ಲಿ ಅಶಾಂತಿ ಉಂಟಾಗಲು ಸಾಧ್ಯವಿಲ್ಲ. ಕಾನೂನು ಅರಿತುಕೊಂಡು ಪಾಲಿಸದಿದ್ದಾಗ ಪೊಲೀಸರು ಲಾಠಿ ಮೂಲಕ ಕಾನೂನು ಪಾಲನೆ ಮಾಡಿಸುವ ಪರಿಸ್ಥಿತಿ ಬರಲಿದೆ ಎಂದು ಬಂಟ್ವಾಳ ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಹೇಳಿದರು. 

 ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಬಂಟ್ವಾಳ ಹಾಗೂ ಪುತ್ತೂರು ಶಾಖಾ ಪ್ರಾಯೋಜಕತ್ವದಲ್ಲಿ ಸೋಮವಾರ (ಫೆ 14) ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಕಾನೂನು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಾನೂನು ಮೀರಿ ವರ್ತಿಸಲೇಬಾರದು. ಹಾಗೇನಾದರೂ ವರ್ತಿಸಿದ್ರೆ ಇಲ್ಲಿನ ಕಾನೂನು ನಿಮ್ಮನ್ನು ಕ್ಷಮಿಸೋದಿಲ್ಲ. ಭವಿಷ್ಯ ಹಾಳಾಗಿ ಬಿಡುತ್ತದೆ. ಸರಕಾರಿ ಸೊತ್ತುಗಳಿಗೆ ಹಾನಿ ಮಾಡಕೂಡದರು. ಶಾಂತಿಭಂಗ ಆಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ‘

ಕೆರೆಯ ನೀರು ಕೆರೆಗೆ ಚೆಲ್ಲಿ’ ಎಂಬಂತೆ ವಿದ್ಯಾರ್ಥಿ ವೇತನ ಪಡೆದುಕೊಂಡು ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆದು ಅದರ ಋಣವನ್ನು ಸಮಾಜಕ್ಕೆ ಅರ್ಪಿಸಲೇಬೇಕು ಎಂದವರು ಇದೇ ವೇಳೆ ಫಲಾನುಭವಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

 ಕಾನೂನು ಅರಿವು ಮಾಹಿತಿ ನೀಡಿದ ಯುವ ನ್ಯಾಯವಾದಿ ಅಬ್ದುಲ್ ಜಲೀಲ್ ನಂದಾವರ ಮಾತನಾಡಿ, ಮನುಷ್ಯ ಜೀವನದಲ್ಲಿ ಕಾನೂನು ಎಂಬುದು ಅವಿಭಾಜ್ಯ ಅಂಗ. ಕಾನೂನು ಅರಿವು ಇಲ್ಲ ಎಂಬುದು ಕ್ಷಮಾರ್ಹವಲ್ಲ. ಕಾನೂನಿಂದ ವಿನಾಯಿತಿ ಪಡೆಯಲು ಒಂದೋ ಪ್ರಾಣಿಯಾಗಿರಬೇಕು ಇಲ್ಲ ದೇವರಾಗಿರಬೇಕು. ಮನುಷ್ಯ ಆದ ಮೇಲೆ ಅವರು ಕಾನೂನು ಅರಿಯುವುದರ ಜೊತೆಗೆ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದರು. 

 ಮುಖ್ಯ ಅತಿಥಿಗಳಾಗಿ ಬಂಟ್ವಾಳ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ರಮ್ಯಾ ಎಚ್.ಆರ್., ಎಪಿಪಿ ಸರಸ್ವತಿ, ಶಿಕ್ಷಣಾಧಿಕಾರಿ ಸುಜಾತಾ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಗಣೇಶಾನಂದ ಸೋಮಯಾಜಿ, ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಸಜಿಪಮೂಡ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಪುತ್ತೂರು ನಂದನಾ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ದಾಮೋದರ ಪಾಟಾಳಿ, ಪುತ್ತೂರು-ದರ್ಬೆ ಗೂಡ್ಸ್ ಚಾಲಕ-ಮಾಲಕ ಸಂಘದ ಉಪಾಧ್ಯಕ್ಷ ಮೋಹನ್ ನಾಯಕ್, ಕರಾವಳಿ ಟೈಮ್ಸ್ ಪತ್ರಿಕಾ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ರಾಜ್ಯ ಕಾನೂನು ಮುಖ್ಯಸ್ಥ ಉಲ್ಲಾಸ್ ನಾಯಕ್, ಬಂಟ್ವಾಳ ಶಾಖಾಧಿಕಾರಿ ಪುನೀತ್ ಕುಮಾರ್, ಪುತ್ತೂರು ಶಾಖಾಧಿಕಾರಿ ಜಯಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 

ಪ್ರಸ್ತಾವನೆಗೈದ ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಉಪಾಧ್ಯಕ್ಷ ಶರಶ್ಚಂದ್ರ ಭಟ್ ಕಾಕುಂಜೆ ಅವರು ಮಾತನಾಡಿ, ದೇಶದ ಖಾಸಗಿ ರಂಗದಲ್ಲಿ ಅತ್ಯಂತ ಹಳೆಯ ಹಾಗೂ ದೊಡ್ಡ ವಾಣಿಜ್ಯ ಹಾಗೂ ಖಾಸಗಿ ವಾಹನಗಳಿಗೆ ಸಾಲ ಒದಗಿಸುವ ಸಂಸ್ಥೆಯಾಗಿರುವ ಶ್ರೀರಾಮ್ ಟ್ರಾನ್ಸ್ ಪೆÇೀರ್ಟ್ ಫೈನಾನ್ಸ್ ಸಂಸ್ಥೆ ದೇಶಾದ್ಯಂತ 1670 ಶಾಖೆಗಳನ್ನು ಹಾಗೂ 770 ಗ್ರಾಮೀಣ ಸೇವಾ ಕೇಂದ್ರಗಳನ್ನು ಹೊಂದಿದೆ. ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮಕ್ಕಳಿಗೆ ಸಂಸ್ಥೆಯು ಪ್ರತೀ ವರ್ಷ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಈ ಬಾರಿ ಸಂಸ್ಥೆಯ ವತಿಯಿಂದ ದ.ಕ ಜಿಲ್ಲೆಯ 1800 ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ ಒಟ್ಟು 54 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಲಿದೆ. ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಒಟ್ಟು 338 ಮಂದಿ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ ಒಟ್ಟು 10,84,500/- ರೂಪಾಯಿ ವಿದ್ಯಾರ್ಥಿ ವೇತನ ಇಂದಿನ ಕಾರ್ಯಕ್ರಮದಲ್ಲಿ ವಿತರಿಸಲಾಗಿದೆ ಎಂದರು. 

 ಶ್ರೀರಾಂ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ರಾಜ್ಯ ಮುಖ್ಯಸ್ಥ ನಾಗರಾಜ್ ಬಿ ಸ್ವಾಗತಿಸಿ, ರೀಜನಲ್ ಬ್ಯುಸಿನೆಸ್ ಮುಖ್ಯಸ್ಥ ಚೇತನ್ ಅರಸ್ ವಂದಿಸಿದರು. ದೇರಳಕಟ್ಟೆ ವಿದ್ಯಾರತ್ನ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಪ್ರಶಾಂತ್ ಕಾರ್ಗಲ್ಲು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳು ಕಾನೂನು ಮೀರಿ ವರ್ತಿಸಿ ಸುಂದರ ಭವಿಷ್ಯಕ್ಕೆ ಕಲ್ಲು ಹಾಕದಿರಿ : ಬಂಟ್ವಾಳ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಕರೆ  Rating: 5 Reviewed By: karavali Times
Scroll to Top