ಬಂಟ್ವಾಳ, ಮಾರ್ಚ್ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೇಂದ್ರ ಮಸೀದಿಯಾಗಿರುವ ಸಾವಿರ ಜಮಾಅತ್ ಒಳಗೊಂಡಿರುವ ಮಿತ್ತಬೈಲು ಮಸೀದಿಗೆ ಮಾರಕಾಯುಧ ಸಹಿತ ಅಕ್ರಮ ಪ್ರವೇಶ ಮಾಡಿ ಸಮಾಜದ ಶಾಂತಿಗೆ ಸವಾಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಹಿನ್ನಲೆಯನ್ನು ಸಮಗ್ರ ತನಿಖೆ ನಡೆಸಿ ಸಮಾಜದಲ್ಲಿ ಉಂಟಾಗಿರುವ ಆತಂಕ ದೂರ ಮಾಡುವಂತೆ ಬಂಟ್ವಾಳ ಪುರಸಭಾಧ್ಯಕ್ಷ, ಮಿತ್ತಬೈಲು ಜಮಾಅತ್ ಸದಸ್ಯ ಹಾಗೂ ಮಸೀದಿ ಪರಿಸರದ ವಾರ್ಡ್ ಕೌನ್ಸಿಲರ್ ಕೂಡಾ ಆಗಿರುವ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ತಡ ರಾತ್ರಿ ವೇಳೆ ಏಕಾಏಕಿ ಮಾರಕಾಯುಧ ಸಹಿತವಾದ ದ್ವಿಚಕ್ರ ವಾಹನದೊಂದಿಗೆ ಆಗಮಿಸಿರುವ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಬಾಬು ಪೂಜಾರಿ ಎನ್ನುವ ವ್ಯಕ್ತಿ ಯಾರು? ಈತನ ಹಿನ್ನಲೆ ಮುನ್ನಲೆ ಏನು? ಯಾತಕ್ಕಾಗಿ ಈ ಕೃತ್ಯಕ್ಕೆ ಇಳಿದಿದ್ದಾನೆ? ಇದರ ಹಿಂದೆ ಯಾವುದಾದರೂ ದುಷ್ಕೃತ್ಯದ ಸಂಚು ಅಡಗಿದೆಯಾ ಎಂಬಿತ್ಯಾದಿಯಾಗಿ ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆಗೊಳಪಡಿಸಿ, ತಪ್ಪಿತಸ್ಥ ಎಂದಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಂಡು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವಂತೆ ಅವರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಈಗಾಗಲೇ ನಾನು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ರಾತ್ರಿಯೇ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ಹಗಲು ವೇಳೆಯಲ್ಲಿ ಸಮಗ್ರ ತನಿಖೆಗೊಳಪಡಿಸಿ ಪೂರ್ವಯೋಜಿತವಾಗಿ ಆರೋಪಿ ಏನಾದರೂ ಕೃತ್ಯಕ್ಕೆ ಬಂದಿರುವುದು ಸಾಬೀತಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಯಾವುದೇ ರಾಜಕೀಯ ಪ್ರೇರಿತ ಪ್ರಚೋದನೆಗಳಿಗೆ ಒಳಗಾಗದೆ ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡುವುದರ ಜೊತೆಗೆ ಸಮಾಜದ ಶಾಂತಿ-ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಪುರಸಭಾಧ್ಯಕ್ಷ ಶರೀಫ್ ಅವರು ವಿನಂತಿಸಿದ್ದಾರೆ.
0 comments:
Post a Comment