ಕಲ್ಲಡ್ಕ ಅಪೋಲೋ ಸಂಸ್ಥೆಯ ಕಳವು ಕೃತ್ಯ ಬೇಧಿಸಿದ ಬಂಟ್ವಾಳ ನಗರ ಪೊಲೀಸ್ ತಂಡ : 3 ಮಂದಿ ಆರೋಪಿಗಳ ಸಹಿತ ಲಕ್ಷಾಂತರ ಮೌಲ್ಯದ ಸೊತ್ತು ವಶ - Karavali Times ಕಲ್ಲಡ್ಕ ಅಪೋಲೋ ಸಂಸ್ಥೆಯ ಕಳವು ಕೃತ್ಯ ಬೇಧಿಸಿದ ಬಂಟ್ವಾಳ ನಗರ ಪೊಲೀಸ್ ತಂಡ : 3 ಮಂದಿ ಆರೋಪಿಗಳ ಸಹಿತ ಲಕ್ಷಾಂತರ ಮೌಲ್ಯದ ಸೊತ್ತು ವಶ - Karavali Times

728x90

9 April 2022

ಕಲ್ಲಡ್ಕ ಅಪೋಲೋ ಸಂಸ್ಥೆಯ ಕಳವು ಕೃತ್ಯ ಬೇಧಿಸಿದ ಬಂಟ್ವಾಳ ನಗರ ಪೊಲೀಸ್ ತಂಡ : 3 ಮಂದಿ ಆರೋಪಿಗಳ ಸಹಿತ ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಂಟ್ವಾಳ, ಎಪ್ರಿಲ್ 09, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಅಪೋಲೋ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಅಮ್ಟೂರು ಗ್ರಾಮದ ರಾಯಪ್ಪಕೋಡಿಯ ವರ್ಕ್ ಶಾಪಿನ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಮಹೀಂದ್ರ ಬೊಲೆರೋ ಪಿಕಪ್ ವಾಹನ ಹಾಗೂ ವೆಲ್ಡಿಂಗ್ ಯಂತ್ರವನ್ನು ಬುಧವಾರ (ಎ 5) ರಾತ್ರಿ ಕಳವುಗೈದ ಪ್ರಕರಣವನ್ನು ಶುಕ್ರವಾರ ಬೇಧಿಸಿದ ಪೊಲೀಸರು ಸೊತ್ತುಗಳ ಸಹಿತ ಮೂರು ಮಂದಿ ಆರೋಪಿಗಳಾದ ಕಾಸರಗೋಡು ಮಿಂಜ ಗ್ರಾಮದ ನವೋದಯ ನಗರ ನಿವಾಸಿಗಳಾದ ಗಿರೀಶ್ ಜೋಗಿ ಅವರ ಪುತ್ರ  ಲತೀಶ್ ಜೋಗಿ, ಶಂಕರ್ ಅವರ ಪುತ್ರ ರವಿಕಿರಣ ಹಾಗೂ ಕಾಸರಗೋಡು, ಮಂಜೇಶ್ವರ ತಾಲೂಕು ಎನ್ಮಕಜೆ ಗ್ರಾಮದ ನಿವಾಸಿ ರಾಜೇಶ್ ಅವರ ಪುತ್ರ ವಿಶ್ವನಾಥ್ ಅವರನ್ನು ದಸ್ತಗಿರಿ ಮಾಡಿದ್ದಾರೆ. 

ಸುಲೈಮಾನ್ ಅವರ ಮಾಲಕತ್ವದ ಅಪೋಲೋ ಎಲೆಕ್ಟ್ರಿಕಲ್ಸ್ ಇದರ ವರ್ಕ್ ಶಾಪಿನಲ್ಲಿ ಬುಧವಾರ ಸಂಜೆ ಹಾಗೂ ಗುರುವಾರ ಬೆಳಗ್ಗಿನ ಮಧ್ಯೆ ಈ ಕಳವು ಕೃತ್ಯ ನಡೆದಿದ್ದು, ಗುರುವಾರ ಬೆಳಿಗ್ಗೆ ಸಂಸ್ಥೆಯ ಮ್ಯಾನೇಜರ್ ವರ್ಕ್ ಶಾಪ್ ಬಾಗಿಲು ತೆರೆಯಲು ಬಂದಿದ್ದ ವೇಳೆ ಬೆಳಕಿಗೆ ಬಂದಿದೆ. 

ಪ್ರಕರಣವನ್ನು ಬೇಧಿಸಲು ಜಿಲ್ಲಾ ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ ಮತ್ತು ಜಿಲ್ಲಾ ಎಡಿಶಲ್ ಎಸ್ಪಿ ಕುಮಾರ ಚಂದ್ರ ಅವರ  ಮಾರ್ಗದರ್ಶನದಂತೆ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ನಿರ್ದೇಶನದಲ್ಲಿ ಬಂಟ್ವಾಳ ನಗರ ಠಾಣಾ ಇನ್ಸ್‍ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ಪಿಎಸ್ಸೈಗಳಾದ ಅವಿನಾಶ್ ಮತ್ತು ಕಲೈಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣ, ಇರ್ಷಾದ್, ಮನೋಹರ್, ಗಣೇಶ್, ರಾಘವೇಂದ್ರ, ನಾಗರಾಜ್, ಮೋಹನ್ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ಅವರನ್ನೊಳಗೊಂಡ ಎರಡು ತಂಡಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಆರೋಪಿಗಳ ಪತ್ತೆ ಹಚ್ಚಿ ಕಳವು ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳು ಕಳವು ಕೃತ್ಯವನ್ನು ಒಪ್ಪಿಕೊಂಡಿದ್ದು, ಆರೋಪಿಗಳಿಂದ ಕಳವಾಗಿದ್ದ 2.30 ಲಕ್ಷ ರೂಪಾಯಿ ಮೌಲ್ಯದ ಕೆಎ 19 ಎಬಿ 5366 ನೋಂದಣಿ ಸಂಖ್ಯೆಯ ಪಿಕ್ ಅಪ್ ವಾಹನದ ಮೌಲ್ಯ, 5 ಸಾವಿರ ರೂಪಾಯಿ ಮೌಲ್ಯದ ವೆಲ್ಡಿಂಗ್ ಮಿಷನ್, 1500/- ರೂಪಾಯಿ ಮೌಲ್ಯದ ಕಂಪ್ಯೂಟರ್ ಮಾನಿಟರ್, 150/- ರೂಪಾಯಿ ಮೌಲ್ಯದ ಕಂಪ್ಯೂಟರ್ ಮೌಸ್, 5 ಸಾವಿರ ರೂಪಾಯಿ ಮೌಲ್ಯದ ಡಿವಿಆರ್, 7,020/- ರೂಪಾಯಿ ನಗದು ಹಣ ಸಹಿತ ಒಟ್ಟು 2 ಲಕ್ಷದ 48 ಸಾವಿರ 670 ರೂಪಾಯಿ ಮೌಲ್ಯದ ಸೊತ್ತುಗಳ ಜೊತೆಗೆ ಕಳ್ಳತನ ಕೃತ್ಯಕ್ಕೆ ಆರೋಪಿಗಳು ಬಳಸಿದ್ದ 35 ಸಾವಿರ ರೂಪಾಯಿ ಮೌಲ್ಯದ ಕೆಎಲ್ 14 ಜೆ 5505 ಬೈಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಅಪೋಲೋ ಸಂಸ್ಥೆಯ ಕಳವು ಕೃತ್ಯ ಬೇಧಿಸಿದ ಬಂಟ್ವಾಳ ನಗರ ಪೊಲೀಸ್ ತಂಡ : 3 ಮಂದಿ ಆರೋಪಿಗಳ ಸಹಿತ ಲಕ್ಷಾಂತರ ಮೌಲ್ಯದ ಸೊತ್ತು ವಶ Rating: 5 Reviewed By: karavali Times
Scroll to Top