ನೇರಳಕಟ್ಟೆ : ಅಟೋ ಚಾಲಕನ ದ್ವೇಷದ ಹುಚ್ಚಾಟಕ್ಕೆ ಹಾಡಹಗಲೇ ಹೆದ್ದಾರಿ ಬದಿ ಇರಿತಕ್ಕೆ ಬಲಿಯಾದ ಮಹಿಳೆ, ಆರೋಪಿ ಬಂಧನ - Karavali Times ನೇರಳಕಟ್ಟೆ : ಅಟೋ ಚಾಲಕನ ದ್ವೇಷದ ಹುಚ್ಚಾಟಕ್ಕೆ ಹಾಡಹಗಲೇ ಹೆದ್ದಾರಿ ಬದಿ ಇರಿತಕ್ಕೆ ಬಲಿಯಾದ ಮಹಿಳೆ, ಆರೋಪಿ ಬಂಧನ - Karavali Times

728x90

27 June 2022

ನೇರಳಕಟ್ಟೆ : ಅಟೋ ಚಾಲಕನ ದ್ವೇಷದ ಹುಚ್ಚಾಟಕ್ಕೆ ಹಾಡಹಗಲೇ ಹೆದ್ದಾರಿ ಬದಿ ಇರಿತಕ್ಕೆ ಬಲಿಯಾದ ಮಹಿಳೆ, ಆರೋಪಿ ಬಂಧನ

 ಬಂಟ್ವಾಳ, ಜೂನ್ 27, 2022 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಚಾಲಕನೋರ್ವ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ನೇರಳಕಟ್ಟೆ ಸಮೀಪದ ಕೊಡಾಜೆ-ಗಣೇಶ ನಗರದ ಜನಪ್ರಿಯ ಗಾರ್ಡನ್ ಹಾಲ್ ಎದುರು ಭಾಗದಲ್ಲಿ ಸೋಮವಾರ ಅಪರಾಹ್ನ ಸಂಭವಿಸಿದ್ದು, ವೈಯುಕ್ತಿಕ ದ್ವೇಷದಿಂದ ಆರೋಪಿ ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿರುವ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

 ಮೃತ ಮಹಿಳೆಯನ್ನು ಬಂಟ್ವಾಳ ತಾಲೂಕು, ಅನಂತಾಡಿ ಗ್ರಾಮದ ದೇವಿನಗರ ನಿವಾಸಿ ಸಂಜೀವ ಡಿ ಅವರ ಪತ್ನಿ ಶಕುಂತಳಾ (39) ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ಅಟೋ ರಿಕ್ಷಾ ಚಾಲಕ ಶ್ರೀಧರ ಎಂದು ಹೆಸರಿಸಲಾಗಿದೆ. 

 ಮೃತ ಶಕುಂತಳ ಸುಮಾರು 5 ವರ್ಷಗಳಿಂದ ಪುತ್ತೂರಿನ ಕೊಂಬೆಟ್ಟು ಇನ್ ಲ್ಯಾಂಡ್ ಕಟ್ಟಡದ ಎದುರಿನಲ್ಲಿರುವ ವಿನಾಯಕ ಎಂಬ ಕ್ಯಾಂಟೀನ್ ವ್ಯವಹಾರ ನಡೆಸುತ್ತಿದ್ದು . ಇತ್ತೀಚೆಗೆ 1 ವರ್ಷದಿಂದ ಸ್ಕೂಟರ್ ನಲ್ಲಿ ಪುತ್ತೂರಿಗೆ ಹೋಗಿ ಬರುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಿಂತ ಮುಂಚೆ ಅನಂತಾಡಿ ಗೋಳಿಕಟ್ಟೆಯ ಲಿಂಗಪ್ಪ ಎಂಬವರ ದೂರದ ಸಂಬಂಧಿಯಾದ ಯಮನಾಜೆಯ ಶ್ರೀಧರ ಎಂಬಾತನ ಆಟೋ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದರು ಎನ್ನಲಾಗಿದೆ. 

ಹೀಗಿರುತ್ತಾ ಸುಮಾರು 1 ವರ್ಷದ ಹಿಂದೆ ಶ್ರೀಧರನು ಶಕುಂತಳಾರ ಮನೆಯ ಬಳಿಗೆ ಬಂದು ಆಕೆಗೆ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆ ಬಳಿಕ ಆತ ಶಕುಂತಳಾರ ಸುದ್ದಿಗೆ ಬಾರದೇ ಇದ್ದು, ಆಕೆಯ ಕ್ಯಾಂಟೀನ್ ಬಳಿಯಲ್ಲಿ ಆತನು ಆಟೋ ರಿಕ್ಷಾದಲ್ಲಿ ಹೋಗುವ ಸಮಯ ಆಕೆಯನ್ನು ಗುರಾಯಿಸಿಕೊಂಡು ಹೋಗುತ್ತಿರುವುದಾಗಿಯೂ , ಆತನನ್ನು ಕಂಡರೆ ನನಗೆ ಹದರಿಕೆ ಆಗುತ್ತಿದೆ ಎಂಬುದಾಗಿ ಗಂಡನಲ್ಲಿ ಶಕುಂತಳಾ ಹೇಳಿಕೊಳ್ಳುತ್ತಿದ್ದರು ಎಂದು ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. 

 ಸೋಮವಾರ (ಜೂನ್ 27) ಮಧ್ಯಾಹ್ನ 3.15 ಗಂಟೆ ಸಮಯವಾದರೂ ಶಕುಂತಳಾ ಕ್ಯಾಂಟೀನ್ ಗೆ ಬಾರದೇ ಇದ್ದು , ಮಧ್ಯಾಹ್ನ ಸುಮಾರು 3.25ರ ವೇಳೆಗೆ ಗಂಟೆಗೆ ಅನಂತಾಡಿಯ ಸಂತೋಷ್ ಎಂಬಾತನು ಶಕುಂತಳಾರ ಪತಿಗೆ ಫೋನು ಮಾಡಿ ಹೆಂಡತಿ ಶಕುಂತಳರವರಿಗೆ ಕೊಡಾಜೆಯಲ್ಲಿ‌ ನೋಂದಣಿ ಸಂಖ್ಯೆ ಕೆಎ 21 ಬಿ 6071 ರ ಅಟೋ ರಿಕ್ಷಾ ಚಾಲಕ ಚೂರಿಯಿಂದ ಹೊಟ್ಟೆಗೆ ಹಾಗೂ ದೇಹದ ಇತರ ಭಾಗಕ್ಕೆ ತಿವಿದು ಗಾಯಗೊಳಿಸಿದ್ದು ಆಕೆಯನ್ನು ಮಾಣಿಯಿಂದ ಅಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಅವರ ಪತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಹೆಂಡತಿಯ ಮುಖ, ಕೈ ಹೊಟ್ಟೆ, ತಲೆಯ ಭಾಗ ಹಾಗೂ ದೇಹದ ಇತರ ಕಡೆಗಳಲ್ಲಿ ರಕ್ತಗಾಯವಾಗಿ ವಿಪರೀತ ರಕ್ತಸ್ರಾವವಾಗಿ ಮಧ್ಯಾಹ್ನ 3.30 ಗಂಟೆ ಸಮಯಕ್ಕೆ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿದ್ದು ನಂತರದಲ್ಲಿ ತನ್ನ ಸಂಬಂದಿಕರ ಮೊಬೈಲ್ ಗೆ ವಾಟ್ಸಪ್ ಮುಖಾಂತರ ವೀಡಿಯೊ ಒಂದು ಬಂದಿದ್ದು ಇದರಲ್ಲಿ ಆಟೋ ಸಂಖ್ಯೆ ಕೆಎ 21 ಬಿ 6071 ನೇದರ ಚಾಲಕ ಗಣೇಶ್ ನಗರದ ಜನಪ್ರಿಯ ಹಾಲ್ ಎದರು ಹೆದ್ದಾರಿಯ ಬದಿಯಲ್ಲಿ ಸಮಯ ಮಧ್ಯಾಹ್ನ 2.50 ಗಂಟೆಯಿಂದ 3.00 ಗಂಟೆ ಅವಧಿಯಲ್ಲಿ ಶಕುಂತಳಾಗೆ ತಿವಿದು ಗಾಯಗೊಳಿಸಿರುವುದನ್ನು ಖಾಸಗಿ ಬಸ್ಸು ಚಾಲಕರೊಬ್ಬರು ವಿಡಿಯೋ ಚಿತ್ರೀಕರಣ ಮಾಡಿರುವುದು ತಿಳಿಯಿತು.

 ಶ್ರೀಧರನು ಸದ್ರಿ ಆಟೋವನ್ನು ಪುತ್ತೂರಿನಲ್ಲಿ ಚಲಾಯಿಸುವುದನ್ನು ಹೆಚ್ಚಾಗಿ ನೋಡಲಾಗಿದ್ದು, ಸೋಮವಾರ ತನ್ನ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಚೂರಿಯಿಂದ ತಿವಿದು ಕೊಲೆ ಮಾಡಿರುವುದಾಗಿದೆ ಎಂದು ಶಕುಂತಳಾರ ಪತಿ ಸಂಜೀವ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಾರೆ ಅಟೋ ರಿಕ್ಷಾ ಚಾಲಕ ಶ್ರೀಧರನ ವೈಯುಕ್ತಿಕ ದ್ವೇಷದ ಹುಚ್ಚಾಟಕ್ಕೆ ಅಮಾಯಕ ಮಹಿಳೆಯೋರ್ವರು ಹಾಡಹಗಲೇ ಹೆದ್ದಾರಿಯಲ್ಲೇ ಇರಿತಕ್ಕೆ ಬಲಿಯಾಗುವಂತಾಗಿದೆ. 

 ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 107/2022 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀಧರನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ನೇರಳಕಟ್ಟೆ : ಅಟೋ ಚಾಲಕನ ದ್ವೇಷದ ಹುಚ್ಚಾಟಕ್ಕೆ ಹಾಡಹಗಲೇ ಹೆದ್ದಾರಿ ಬದಿ ಇರಿತಕ್ಕೆ ಬಲಿಯಾದ ಮಹಿಳೆ, ಆರೋಪಿ ಬಂಧನ Rating: 5 Reviewed By: karavali Times
Scroll to Top