ಬಂಟ್ವಾಳ, ಸೆಪ್ಟೆಂಬರ್ 07, 2022 (ಕರಾವಳಿ ಟೈಮ್ಸ್) : ಸಂಸದಾ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ಆಶ್ರಯದಲ್ಲಿ ತಾಲೂಕಿನ ವೀರಕಂಭ-ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಇತ್ತೀಚೆಗೆ ವಿಶಿಷ್ಟವಾಗಿ ನೆರವೇರಿತು.
ಮಕ್ಕಳ ಕಲಿಕೆ, ಓದು, ಶಾಲಾ ಚಟುವಟಿಕೆ, ಇಲಾಖೆಯ ಕಾರ್ಯಕ್ರಮಗಳು ಹೀಗೆ ಸದಾ ಒತ್ತಡದಲ್ಲೇ ಕೆಲಸ ಮಾಡುವ ಶಿಕ್ಷಕರಿಗೆ ಮನೋರಂಜನೆಯನ್ನು ನೀಡುವ ಉದ್ದೇಶದಿಂದ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಮಂಗಳವಾರ ಸಂಸದಾ ಸೇವಾ ಪ್ರತಿಷ್ಠಾನದ ವತಿಯಿಂದ ಸಂಸ್ಥೆಯ ಸದಸ್ಯರಾದ ಹಸಿರು ದಳದ ನಾಗರಾಜ್ ಬಜಾಲ್ ಹಾಗೂ ಸೆಲ್ಕೋ ಉದ್ಯೋಗಿ ರವೀಣಾ ಬಂಗೇರ ಶಾಲಾ ಅಂಗಣದಲ್ಲಿ ವಿವಿಧ ಮನೋರಂಜನಾ ಆಟಗಳನ್ನು ಶಿಕ್ಷಕರಿಗಾಗಿ ಆಯೋಜಿಸಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ಆಟಗಳನ್ನು ಆಡಿ ಶಿಕ್ಷಕರು ಸಂಭ್ರಮಿಸಿದರೆ, ತಮ್ಮ ಮೆಚ್ಚಿನ ಶಿಕ್ಷಕರಿಗೆ ವಿದ್ಯಾರ್ಥಿಗಳು ಚಪ್ಪಾಳೆಯ ಪ್ರೋತ್ಸಾಹ ನೀಡಿ ಶಿಕ್ಷಕರ ಸಂಭ್ರಮದಲ್ಲಿ ತಾವು ಪಾಲುದಾರರಾದರು. ಸಂಗೀತ ಕುರ್ಚಿ, ಕ್ಯಾಟ್‍ವಾಕ್, ಅಂತ್ಯಾಕ್ಷರಿ, ಬಲೂನು ಮೊದಲಾದ ಆಟಗಳನ್ನು ಶಿಕ್ಷಕರಿಗಾಗಿ ಆಯೋಜಿಸಲಾಗಿತ್ತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಸಂದೀಪ್ ಸಾಲ್ಯಾನ್, ಶಾಲಾಭಿಮಾನಿ ಚಿನ್ನಮೈರಾ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್ ಕೆ ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment