ಬೆಳ್ಳಾರೆ, ಅಕ್ಟೋಬರ್ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ಬೆಡ್ ಶೀಟ್ ಮಾರಾಟಕ್ಕೆ ಬಂದಿದ್ದ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪುನೀತ್, ರಾಜು, ಪ್ರಸಾದ್, ಕಿಶೋರ್, ಭವಿತ್ ಹಾಗೂ ರಂಜಿತ್ ಎಂಬವರೇ ಬಂಧಿತ ಹಲ್ಲೆಕೋರರು. ಮಂಗಳೂರು ತಾಲೂಕು, ಅಡ್ಡೂರು ಗ್ರಾಮದ ಹೊಳೆಬದಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ರಮೀಜುದ್ದೀನ್ (29) ಅವರು ಬೆಳ್ಳಾರೆ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದು, ನಾನು ಸಂಬಂಧಿಕ ಮಹಮ್ಮದ್ ರಫೀಕ್ ಎಂಬವರೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ಗುರುವಾರ (ಅ 20) ಕಡಬ ತಾಲೂಕು ಎಡಮಂಗಲ ಹಾಗೂ ದೋಲ್ಪಾಡಿ ಗ್ರಾಮ ಪರಿಸರದಲ್ಲಿ ನೋಂದಣಿ ಸಂಖ್ಯೆ ಕೆಎ 51 ಎಂಎ 2319 ರ ಕಾರಿನಲ್ಲಿ ಬಂದು ಮಾರಾಟ ಮಾಡುತ್ತಿರುವ ವೇಳೆ ಮನೆಯೊಂದರದಲ್ಲಿದ್ದ ಹೆಂಗಸರ ಜೊತೆ ಬೆಡ್ ಶೀಟ್ ಮಾರಾಟದ ವಿಚಾರದಲ್ಲಿ ತಕರಾರು ಉಂಟಾಗಿ ಅಲ್ಲಿಂದ ವಾಪಸ್ಸು ಕಾಣಿಯೂರು ಕಡೆಗೆ ಬರುತ್ತಾ, ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿಗೆ ಮಧ್ಯಾಹ್ನ 2 ಗಂಟೆಗೆ ತಲುಪಿದಾಗ ಅಲ್ಲಿ ಗುಂಪು ಸೇರಿದ್ದ ನೋಡಿದರೆ ಗುರುತಿಸಬಹುದಾದ ಮಂದಿಗಳು ಪಿಕಪ್ ವಾಹನವೊಂದನ್ನು ರಸ್ತೆಗೆ ಅಡ್ಡವಾಗಿಟ್ಟು ನಾವು ಚಲಾಯಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ನನ್ನ ಹಾಗೂ ಜೊತೆಯಲ್ಲಿದ್ದ ಮಹಮ್ಮದ್ ರಫೀಕ್ ಅವರನ್ನು ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ಕೆಲವರ ಕೈಯಲ್ಲಿದ್ದ ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ, ಕೈಯಿಂದ ಹೊಡೆದು ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ, ತರಚಿದ, ಗುದ್ದಿದ, ರಕ್ತ ಹೆಪ್ಪುಗಟ್ಟಿದ ಹಾಗೂ ರಕ್ತಗಾಯಗಳು ಉಂಟು ಮಾಡಿದ ಅವರು, ಬಂದಿದ್ದ ಕಾರನ್ನು ಹುಡಿ ಮಾಡಿ ಜಖಂಗೊಳಿಸಿ ಸುಮಾರು 1.50 ಲಕ್ಷಗಳಷ್ಟು ನಷ್ಟ ಹಾಗೂ ಕಾರಿನಲ್ಲಿದ್ದ ಬೆಡ್ ಶೀಟ್ ಗಳನ್ನೂ ಬಿಸಾಡಿ ಆ ಪೈಕಿ 25 ಸಾವಿರ ರೂಪಾಯಿ ನಷ್ಟವನ್ನುಂಟುಮಾಡಿರುತ್ತಾರೆ ಎಂದು ದೂರು ನೀಡಿದ್ದರು.
ಈ ಬಗ್ಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2022 ಕಲಂ 143, 144, 341, 504, 323, 324, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬೆಳ್ಳಾರೆ ಪೊಲೀಸರು ಆರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಈ ಮಧ್ಯೆ ಹಲ್ಲೆಗೊಳಗಾದ ಸಂತ್ರಸ್ತರ ವಿರುದ್ದವೂ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಇವರಿಗೆ ಪೊಲೀಸ್ ಕಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿತೆ ಮಾಹಿತಿ ನೀಡಿದ್ದಾರೆ.
0 comments:
Post a Comment