ಕೋಮುವಾದ ಅಳಿಸಿ, ಮಾನವ ಸೌಹಾರ್ದತೆ ಬೆಳೆಸಲು ಮಿಲಾದ್ ಪ್ರೇರಣೆಯಾಗಲಿ : ಅಬೂಬಕ್ಕರ್ ಸಿದ್ದೀಕ್ ಮಿಲಾದ್ ಸಂದೇಶ - Karavali Times ಕೋಮುವಾದ ಅಳಿಸಿ, ಮಾನವ ಸೌಹಾರ್ದತೆ ಬೆಳೆಸಲು ಮಿಲಾದ್ ಪ್ರೇರಣೆಯಾಗಲಿ : ಅಬೂಬಕ್ಕರ್ ಸಿದ್ದೀಕ್ ಮಿಲಾದ್ ಸಂದೇಶ - Karavali Times

728x90

8 October 2022

ಕೋಮುವಾದ ಅಳಿಸಿ, ಮಾನವ ಸೌಹಾರ್ದತೆ ಬೆಳೆಸಲು ಮಿಲಾದ್ ಪ್ರೇರಣೆಯಾಗಲಿ : ಅಬೂಬಕ್ಕರ್ ಸಿದ್ದೀಕ್ ಮಿಲಾದ್ ಸಂದೇಶ

ಬಂಟ್ವಾಳ, ಅಕ್ಟೋಬರ್ 09, 2022 (ಕರಾವಳಿ ಟೈಮ್ಸ್) : ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಹಾಗೂ ಸಾಮರಸ್ಯಕ್ಕೆ ಪವಿತ್ರ ಇಸ್ಲಾಮಿನ ಅಂತ್ಯ ಪ್ರವಾದಿಗಳಾದ ಹಝ್ರತ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು 14 ಶತಮಾನಗಳ ಹಿಂದೆಯೇ ಪ್ರಯತ್ನಿಸಿದ್ದರು. ಪ್ರವಾದಿಗಳ ಮತೀಯ ಸಾಮರಸ್ಯ ಸಂದೇಶಗಳು ಇಂದು ಅತ್ಯಂತ ಹೆಚ್ಚು ಪ್ರಸ್ತುತ ಎಂದು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅಭಿಪ್ರಾಯಪಟ್ಟಿದ್ದಾರೆ.

ಈದ್ ಮಿಲಾದ್ ಪ್ರಯುಕ್ತ ನಾಡಿನ ಜನತೆಗೆ ಸಂದೇಶ ನೀಡಿ ಹೇಳಿಕೆ ನೀಡಿರುವ ಅವರು, ಸಮಾಜದಲ್ಲಿ ಇಂದು ಅತ್ಯಂತ ಹೆಚ್ಚು ಗೊಂದಲ ಹಾಗೂ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿ ಹಾಕಿರುವುದು ಕೋಮುವಾದ ಹಾಗೂ ಮತೀಯವಾದವಾಗಿದೆ. ಇಂದು ರಾಜಕೀಯ ವ್ಯಕ್ತಿಗಳು ಜನರಿಗಾಗಿ ಯಾವುದೇ ಅಭಿವೃದ್ದಿ ಹಾಗೂ ಅಭ್ಯುದಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ ಕೇವಲ ಜನರೆಡೆಯಲ್ಲಿ ಜಾತಿ, ಕೋಮು ವಿಷ ಬೀಜ ಬಿತ್ತಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದು, ಇದರಿಂದ ಜನರು ಕೂಡಾ ತಮ್ಮ ನಾಯಕರನ್ನು ಕಣ್ಣು ಮುಚ್ಚಿ ಅನುಸರಿಸುವ ಮೂಲಕ ಮಾನವೀಯ ಮೌಲ್ಯಗಳಿಗೇ ಬೆನ್ನು ಹಾಕುತ್ತಿರುವುದು ಅತ್ಯಂತ ದುರಂತ ಸನ್ನಿವೇಶ ಸೃಷ್ಟಿಸಿ ಹಾಕುತ್ತಿದೆ. ಇದು ಸಂಪೂರ್ಣವಾಗಿ ಕೊನೆಗೊಳ್ಳಬೇಕು. ಅಂತಹ ಸನ್ನಿವೇಶ ನಿರ್ಮಾಣಗೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳ ನಾಯಕರೂ ರಾಜಕೀಯ ಬದಿಗಿಟ್ಟು ಮಾನವೀಯ ಸಂದೇಶ ಸಾರಬೇಕಾದ ಅನಿವಾರ್ಯತೆ ಇದೆ. ರಾಜಕೀಯವನ್ನು ಕೇವಲ ಅಭಿವೃದ್ದಿ ಪರ ವಿಚಾರಗಳಿಂದ ಕಂಡುಕೊಳ್ಳಬೇಕೆ ಹೊರತು ಜನರ ನಡುವೆ ಭಿನ್ನತೆ ಸೃಷ್ಟಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಯಾವುದೇ ಪ್ರಯತ್ನಕ್ಕೂ ಕೈ ಹಾಕುವ ಪ್ರಯತ್ನ ನಡೆಸದೆ ಸ್ವಯಂ ಆತ್ಮ ವಿಮರ್ಶೆಯ ಕಾಲ ಸನ್ನಿಹಿತವಾಗಿದೆ ಎಂದರು. 

ತನ್ನ ನೆರೆ ಕರೆಯವನು ಸಹೋದರ ಧರ್ಮೀಯ ಎಂಬ ಕಾರಣಕ್ಕೆ ಅಂತರ ಕಾಯ್ದುಕೊಳ್ಳುವ ಮನಸ್ಥಿತಿ ಯಾರಿಗಾದರೂ ಬಂದರೆ ಆತ ನೈಜ ಮುಸಲ್ಮಾನನಾಗಲು ಸಾಧ್ಯವಿಲ್ಲ ಎಂಬ ಪ್ರವಾದಿ ನುಡಿ ಪವಿತ್ರ ಇಸ್ಲಾಮಿನ ಕೋಮು ಸೌಹಾರ್ದತೆಯ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸಂದೇಶವಾಗಿ ಇಂದಿಗೂ ಪ್ರಸ್ತುತ ಎಂದಿರುವ ಅಬೂಬಕ್ಕರ್ ಸಿದ್ದೀಕ್ ಪವಿತ್ರ ಕುರ್ ಆನ್ ಗ್ರಂಥವು ಹಲವು ಕಡೆಗಳಲ್ಲಿ ಜನರನ್ನು ಸಂಬೋಧಿಸುವಾಗ 'ಓ ಮನುಷ್ಯರೇ' ಎಂಬ ವಾಕ್ಯವನ್ನು ಬಳಸಿದೆಯೇ ಹೊರತು ಕೇವಲ 'ಮುಸಲ್ಮಾನರೇ' ಎಂದು ಕರೆದಿಲ್ಲ. ಇದು ಕೂಡಾ ಇಸ್ಲಾಂ ಮಾನವೀಯ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಿರುವ ಬಗ್ಗೆ ದೃಷ್ಟಾಂತವಾಗಿದೆ. 

14 ಶತಮಾನಗಳ ಹಿಂದೆ ಈ ಲೋಕಕ್ಕೆ ಪ್ರವಾದಿಯಾಗಿ ನಿಯಮಿಸಲ್ಪಟ್ಟ ಪ್ರವಾದಿಗಳು ಈ ಲೋಕದ ಭೂತ, ವರ್ತಮಾನ ಹಾಗೂ ಭವಿಷ್ಯದ ಎಲ್ಲಾ ವಿದ್ಯಾಮಾನಗಳ ಬಗ್ಗೆಯೂ ಕಣ್ಣಿನಲ್ಲಿ ಕಂಡವರಂತೆ ಸ್ಪಷ್ಟವಾಗಿ ಸಾರಿ ಹೇಳಿದ್ದು, ಪವಿತ್ರ ಇಸ್ಲಾಮಿನ ಐತಿಹಾಸಿಕ ಗ್ರಂಥಗಳಲ್ಲಿ ಮಹಾತ್ಮರು ಕ್ರೋಢೀಕರಿಸಿದ್ದಾರೆ. ಹೀಗಿರುತ್ತಾ ಲೋಕ ಕಂಡ ಅಸಾಧಾರಣ ವ್ಯಕ್ತಿತ್ವದ ಪ್ರವಾದಿಗಳ ಜನನದಿಂದ ಅನುಗ್ರಹೀತವಾದ ಮಿಲಾದ್ ದಿನ ಅವರ ಉದಾತ್ತ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಧರ್ಮ ಮಾರ್ಗದಲ್ಲಿ ಜೀವಿಸಿದಾಗ ಸಮಾಜದಲ್ಲಿನ ಎಲ್ಲ ಗೊಂದಲಗಳಿಗೂ ಪರಿಹಾರ ಕಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಅಬೂಬಕ್ಕರ್ ಸಿದ್ದೀಕ್ ತಮ್ಮ ಮಿಲಾದ್ ಸಂದೇಶ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೋಮುವಾದ ಅಳಿಸಿ, ಮಾನವ ಸೌಹಾರ್ದತೆ ಬೆಳೆಸಲು ಮಿಲಾದ್ ಪ್ರೇರಣೆಯಾಗಲಿ : ಅಬೂಬಕ್ಕರ್ ಸಿದ್ದೀಕ್ ಮಿಲಾದ್ ಸಂದೇಶ Rating: 5 Reviewed By: karavali Times
Scroll to Top